ಒಂದು ಕೋಟಿ ರೂ. ಗೆ ಬೇಡಿಕೆಯಿಟ್ಟಿದ್ದ ಸೈಫ್ ಅಲಿ ಖಾನ್‌ಗೆ ಚೂರಿಯಿರಿದಿದ್ದ ಅಪರಿಚಿತ!

Update: 2025-01-16 16:19 GMT

ಸೈಫ್ ಅಲಿ ಖಾನ್ | PTI

ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್(54) ಅವರ ಬಾಂದ್ರಾದ ನಿವಾಸಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ಮಿಯೋರ್ವ ಅವರನ್ನು ಚೂರಿಯಿಂದ ಆರು ಬಾರಿ ಇರಿದ ಘಟನೆ ಗುರುವಾರ ಬೆಳಗಿನ ಜಾವ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಖಾನ್ ಅವರನ್ನು ತಕ್ಷಣವೇ ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾನ್ ಮೇಲಿನ ದಾಳಿಯು ಬಾಲಿವುಡ್‌ಗೆ ಆಘಾತವನ್ನುಂಟು ಮಾಡಿದ್ದು,ಸೆಲೆಬ್ರಿಟಿಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಖಾನ್ ಅವರಿಗೆ ತುರ್ತು ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದ್ದು, ಬೆನ್ನುಮೂಳೆಯ ಬಳಿ ಸಿಕ್ಕಿಕೊಂಡಿದ್ದ ಎರಡೂವರೆ ಇಂಚು ಉದ್ದದ ಚೂರಿಯ ತುಂಡನ್ನು ಹೊರತೆಗೆಯಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಖಾನ್ ಅವರನ್ನು ಸದ್ಯ ಐಸಿಯುನಲ್ಲಿಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಒಂದರೆಡು ದಿನಗಳಲ್ಲಿ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ಲೀಲಾವತಿ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ.ನೀರಜ ಉತ್ತಮಣಿ ಸುದ್ದಿಗಾರರಿಗೆ ತಿಳಿಸಿದರು.

ಪೋಲಿಸರ ಪ್ರಕಾರ ನಸುಕಿನ ಎರಡು ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು,ಮನೆಗೆ ನುಗ್ಗಿದ್ದ ದುಷ್ಕರ್ಮಿಯನ್ನು ಖಾನ್ ಎದುರಿಸಿದ್ದರು. ಈ ವೇಳೆ ಆತ ಚೂರಿಯಿಂದ ಅವರಿಗೆ ತಿವಿದಿದ್ದ. ಪೋಲೀಸರು ಸಶಸ್ತ್ರ ಲೂಟಿ ಮತ್ತು ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಖಾನ್‌ಗೆ ಎರಡು ಗಂಭೀರ,ಎರಡು ಮಧ್ಯಮ ಸ್ವರೂಪದ ಮತ್ತು ಎರಡು ತರಚಿದ ಗಾಯಗಳಾಗಿವೆ. ಅವರಿಗೆ ನ್ಯೂರೊ ಸರ್ಜರಿ ಮತ್ತು ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿದೆ ಎಂದು ಉತ್ತಮಣಿ ತಿಳಿಸಿದರು.

ಖಾನ್ ಅವರ ಎದೆಗೂಡಿನ ಬೆನ್ನುಹುರಿ ಸಮೀಪ ಗಂಭೀರ ಗಾಯವಾಗಿತ್ತು. ಎಡಗೈಗೆ ಎರಡು ಆಳವಾದ ಗಾಯಗಳಾಗಿದ್ದವು ಮತ್ತು ಕುತ್ತಿಗೆಯ ಬಲಭಾಗದಲ್ಲಿಯೂ ಗಾಯವಾಗಿತ್ತು ಎಂದು ನ್ಯೂರೊಸರ್ಜನ್ ಡಾ.ನಿತಿನ್ ಡಾಂಗೆ ಹೇಳಿದರು.

ಈ ನಡುವೆ ದುಷ್ಕರ್ಮಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆ ಹಚ್ಚಿರುವ ಪೋಲಿಸರು ತನಿಖೆಗಾಗಿ 10 ತಂಡಗಳನ್ನು ರಚಿಸಿದ್ದಾರೆ.

ಪ್ರಾಥಮಿಕ ತನಿಖೆಯಂತೆ ದುಷ್ಕರ್ಮಿ ಖಾನ್ ಅವರ ಫ್ಲ್ಯಾಟ್‌ನ್ನು ಬಲವಂತದಿಂದ ಪ್ರವೇಶಿಸಿರಲಿಲ್ಲ, ಆದರೆ ರಾತ್ರಿ ಮೊದಲೇ ಒಳಗೆ ನುಸುಳಿದ್ದ ಸಾಧ್ಯತೆಯಿದೆ. ಆತ ಕಟ್ಟಡದ ಆರನೇ ಅಂತಸ್ತಿನಲ್ಲಿ ಇದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೋಲಿಸರು ತಿಳಿಸಿದರು.

ಆಗಂತುಕನನ್ನು ಮೊದಲು ಕಂಡು ಕೂಗಿಕೊಂಡಿದ್ದ ಮನೆಗೆಲಸದಾಳಿಗೂ ಹೊಯ್‌ಕೈ ಸಂದರ್ಭದಲ್ಲಿ ಚೂರಿ ತಾಗಿ ಸಣ್ಣಪುಟ್ಟ ಗಾಯಗಳಾಗಿವೆ. ಆಕೆ ಬಳಿಕ ಪೋಲಿಸ್ ಠಾಣೆಗೆ ತೆರಳಿ ಕೊಲೆಯತ್ನ ಮತ್ತು ಅತಿಕ್ರಮ ಪ್ರವೇಶದ ಆರೋಪದಲ್ಲಿ ದೂರನ್ನು ದಾಖಲಿಸಿದ್ದಾಳೆ.

ಘಟನೆಯು ಸಂಭವಿಸಿದಾಗ ಖಾನ್ ಪತ್ನಿ ಕರೀನಾ ಕಪೂರ್ ಖಾನ್ ಹಾಗೂ ಪುತ್ರರಾದ ತೈಮೂರ್ ಅಲಿ ಖಾನ್ ಮತ್ತು ಜೇಹ್ ಅಲಿ ಖಾನ್ ಮನೆಯಲ್ಲಿದ್ದರು.

ಹಲವಾರು ಮಾಧ್ಯಮ ವರದಿಗಳಂತೆ ಖಾನ್ ತನ್ನ ಕುಟುಂಬದ ರಕ್ಷಣೆಗಾಗಿ ಧಾವಿಸಿದಾಗ ಅವರ ಮೇಲೆ ದಾಳಿ ನಡೆದಿತ್ತು.

ಸೈಫ್ ಅಲಿ ಖಾನ್ ಮನೆಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ, ಸೈಫ್ ಅವರಿಗೆ ಗಾಯಗಳಾಗಿದ್ದು, ಅವರ ಕುಟುಂಬಕ್ಕೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಕರೀನಾ ಕಪೂರ್ ಖಾನ್ ಅವರ ಸಹಾಯಕರಲ್ಲೋರ್ವರು ತಿಳಿಸಿದರು.

ಖಾನ್ ಮತ್ತು ಅವರ ಮೊದಲ ಪತ್ನಿ ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಅವರು ತಂದೆಯನ್ನು ಆಸ್ಪತ್ರೆಗೆ ಸಾಗಿಸಿದ್ದರು. ಅವರು ತಂದೆಯ ಜೊತೆ ವಾಸವಿಲ್ಲವಾದರೂ ದಾಳಿಯ ಮಾಹಿತಿ ಸಿಕ್ಕಿದ ತಕ್ಷಣ ಧಾವಿಸಿ ಬಂದಿದ್ದರು ಎಂದು ವರದಿಗಳು ತಿಳಿಸಿವೆ.

ಖಾನ್ ಅವರ ಬಾಂದ್ರಾ ನಿವಾಸಲ್ಲಿ ಕೆಲಸ ಮಾಡುತ್ತಿರುವವರ ಪೈಕಿ ಯಾರಿಗಾದೂ ದುಷ್ಕರ್ಮಿ ಪರಿಚಿತನಾಗಿದ್ದನೇ ಎಂಬ ನಿಟ್ಟಿನಲ್ಲಿಯೂ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

‘ಕೆಲಸದಾಳು ದುಷ್ಕರ್ಮಿ ಮನೆಯನ್ನು ಪ್ರವೇಶಿಸಲು ನೆರವಾಗಿದ್ದಳು ಮತ್ತು ಯಾವುದೋ ಕಾರಣದಿಂದ ಅವರ ನಡುವೆ ಹೊಯ್‌ಕೈ ನಡೆದಿತ್ತು ಎಂದು ನಾವು ಬಲವಾಗಿ ಶಂಕಿಸಿದ್ದೇವೆ. ಆರೋಪಿಯ ಕುರಿತು ಹೆಚ್ಚಿನ ವಿವರಗಳನ್ನು ಪಡೆಯಲು ಆಕೆಯನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.

ಆರೋಪಿಯು ಕಟ್ಟಡದ ತುರ್ತು ನಿರ್ಗಮನ ವ್ಯವಸ್ಥೆಯ ಭಾಗವಾಗಿರುವ ಅಗ್ನಿ ಅವಘಡದ ಸಮಯದಲ್ಲಿ ಪಾರಾಗಲು ಬಳಸುವ ಮೆಟ್ಟಿಲುಗಳ ಮೂಲಕ ಖಾನ್ ನಿವಾಸವನ್ನು ಪ್ರವೇಶಿಸಿದ್ದ. ಅತ ಆರಂಭದಲ್ಲಿ ಕಳ್ಳತನಕ್ಕೆ ಉದ್ದೇಶಿಸಿದ್ದಂತೆ ಕಂಡು ಬಂದಿದೆ,ಆದರೆ ಖಾನ್ ಮಧ್ಯಪ್ರವೇಶಿಸಿದಾಗ ಹಿಂಸಾತ್ಮಕ ಘರ್ಷಣೆ ನಡೆದಿದೆ ಎಂದು ಡಿಸಿಪಿ ದೀಕ್ಷಿತ ಗೇಡಾಮ್ ತಿಳಿಸಿದರು.

ಖಾನ್ ಅವರ ನಿವಾಸದ ಸಿಬ್ಬಂದಿಗಳು ಮತ್ತು ಕಟ್ಟಡದ ನವೀಕರಣದಲ್ಲಿ ಭಾಗಿಯಾಗಿರುವ ಕಾರ್ಮಿಕರನ್ನು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ. ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆಗೊಳಿಸಿರುವ ಪೋಲಿಸರು ಆತನಿಗಾಗಿ ಶೋಧ ಕಾರ್ಯಾಚರಣೆಯನ್ನು ಮಂದುವರಿಸಿದ್ದಾರೆ.

► ಒಂದು ಕೋ.ರೂ.ಗೆ ಬೇಡಿಕೆ

ದುಷ್ಕರ್ಮಿ ಜೇಹ್ ಕೋಣೆಯ ಮೂಲಕ ಒಳಪ್ರವೇಶಿಸಿದ್ದ ಮತ್ತು ಒಂದು ಕೋ.ರೂ.ನೀಡುವಂತೆ ಆಗ್ರಹಿಸಿದ್ದ ಎಂದು ಮನೆಯ ಕೆಲಸದಾಳಿನ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿವಾಹಿನಿಯು ವರದಿ ಮಾಡಿದೆ.

► ನಾಲ್ಕು ಅಂತಸ್ತುಗಳ ಅಪಾರ್ಟ್‌ಮೆಂಟ್

ಬಾಂದ್ರಾ(ಪಶ್ಚಿಮ)ದಲ್ಲಿಯ 12 ಅಂತಸ್ತುಗಳ ಕಟ್ಟಡದಲ್ಲಿ ಖಾನ್ ಕುಟುಂಬವು ವಾಸವಾಗಿರುವ ಅಪಾರ್ಟ್‌ಮೆಂಟ್ ನಾಲ್ಕು ಅಂತಸ್ತುಗಳನ್ನು ವ್ಯಾಪಿಸಿದೆ.

► ದಾಳಿಗೆ ಖಂಡನೆ,ಚೇತರಿಕೆಗೆ ಹಾರೈಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಖಾನ್ ಮೇಲಿನ ದಾಳಿಯನ್ನು ಖಂಡಿಸಿದ್ದು,ಶೀಘ್ರ ಚೇತರಿಕೆಯನ್ನು ಹಾರೈಸಿದ್ದಾರೆ. ಕೇಂದ್ರ ಸಚಿವ ರಾಮದಾಸ ಆಠವಳೆ ಅವರು ಆಸ್ಪತ್ರೆಗೆ ಭೇಟಿ ನೀಡಿ ನಟನ ಆರೋಗ್ಯವನ್ನು ವಿಚಾರಿಸಿದ್ದಾರೆ.

ತಪ್ಪಿತಸ್ಥನನ್ನು ಪೋಲಿಸರು ಬಿಡುವುದಿಲ್ಲ ಎಂದು ಬಿಜೆಪಿ ವಕ್ತಾರ ರಾಮ ಕದಂ ಹೇಳಿದ್ದಾರೆ.

ಘಟನೆಯ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ದಾಳಿ ನಡೆಸಿರುವ ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು,ನಮ್ಮ ದೇಶದ ಗಡಿಗಳು,ದೇಶ,ರಾಷ್ಟ್ರ ರಾಜಧಾನಿ ಮತ್ತು ದೇಶದ ಜನರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಅದು ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News