ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆಯನ್ನು ಸಾಧಿಸಿದ ವಿಶ್ವದ ನಾಲ್ಕನೇ ದೇಶವಾದ ಭಾರತ

Update: 2025-01-16 14:50 GMT

PC : ISRO 

ಹೊಸದಿಲ್ಲಿ : ತನ್ನ ಸ್ಪೇಸ್ ಡಾಕಿಂಗ್ ಪ್ರಯೋಗ(ಸ್ಪೇಡೆಕ್ಸ್)ದ ಅಂಗವಾಗಿ ಇಸ್ರೋ ಗುರುವಾರ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಮಾನವರಹಿತ ಜೋಡಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ,ತನ್ಮೂಲಕ ಈ ಸಾಧನೆಯನ್ನು ಮಾಡಿದ ವಿಶ್ವದ ನಾಲ್ಕನೇ ದೇಶವಾಗಿ ದಾಖಲಾಗಿದೆ.

‘ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದು ಇಸ್ರೋ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸಂಭ್ರಮವನ್ನು ಹಂಚಿಕೊಂಡಿದೆ.

ಕೇವಲ ಅಮೆರಿಕ,ರಶ್ಯಾ ಮತ್ತು ಚೀನಾ ಭವಿಷ್ಯದ ಬಾಹ್ಯಾಕಾಶ ಅನ್ವೇಷಣೆ ಅಭಿಯಾನಗಳಿಗೆ ನಿರ್ಣಾಯಕ ಮೈಲಿಗಲ್ಲಾಗಿರುವ ಮಾನವರಹಿತ ಡಾಕಿಂಗ್‌ನ್ನು ಪೂರ್ಣಗೊಳಿಸಿರುವ ಇತರ ಮೂರು ದೇಶಗಳಾಗಿವೆ.

ಟಾರ್ಗೆಟ್ ಮತ್ತು ಚೇಸರ್ ಹೀಗೆ ಎರಡು ಉಪಗ್ರಹಗಳನ್ನು ಒಳಗೊಂಡಿರುವ ಸ್ಪೇಡೆಕ್ಸ್ ಅಭಿಯಾನಕ್ಕೆ ಡಿ.30ರಂದು ಚಾಲನೆ ನೀಡಲಾಗಿತ್ತು. ಆಂಧ್ರಪ್ರದೇಶದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸ್ವದೇಶಿ ನಿರ್ಮಿತ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಉಪಗ್ರಹಗಳ ಉಡಾವಣೆ ನಡೆದಿತ್ತು.

ಇಸ್ರೋ ತಾಂತ್ರಿಕ ತೊಂದರೆಗಳಿಂದಾಗಿ ಜ.7 ಮತ್ತು ಜ.9ರಂದು,ಹೀಗೆ ಎರಡು ಸಲ ಡಾಕಿಂಗ್‌ಗಾಗಿ ನಿಗದಿತ ಸಮಯಗಳನ್ನು ತಪ್ಪಿಸಿಕೊಂಡಿತ್ತು.

ಇಸ್ರೋ ಈ ಮೊದಲು ಉಪಗ್ರಹ ಜೋಡಣೆಯನ್ನು ಸಾರ್ವಜನಿಕ ಕಾರ್ಯಕ್ರಮವನ್ನಾಗಿಸಲು ಯೋಜಿಸಿತ್ತು. ಆದರೆ ಎರಡು ಮುಂದೂಡಿಕೆಗಳ ಬಳಿಕ ‘ಡಾಕ್ ಆ್ಯಂಡ್ ಇನ್‌ಫಾರ್ಮ್’ ಯೊಜನೆಗೆ ಬದಲಿಸಿತ್ತು.

ಇಸ್ರೋದಲ್ಲಿ ನಾಯಕತ್ವ ಬದಲಾವಣೆಗಳ ನಡುವೆಯೇ ಈ ಮುಂದೂಡಿಕೆಗಳು ನಡೆದಿದ್ದವು. ಜ.7ರಂದು ಕೇಂದ್ರ ಸರಕಾರವು ವಿ.ನಾರಾಯಣನ್ ಅವರನ್ನು ಇಸ್ರೋದ ನೂತನ ನಿರ್ದೇಶಕರನ್ನಾಗಿ ನೇಮಕಗೊಳಿಸಿದ್ದು, ಅವರು ಜ.14ರಂದು ಅಧಿಕಾರ ಸ್ವೀಕರಿಸಿದ್ದಾರೆ.

ಗುರುವಾರದ ಯಶಸ್ವಿ ಅಭಿಯಾನ ಪ್ರಾಯೋಗಿಕವಾಗಿತ್ತು. ಚಂದ್ರಯಾನ-4 ಡಾಕಿಂಗ್ ಸಾಮರ್ಥ್ಯ ಅಗತ್ಯವಿರುವ ಮೊದಲ ಬಾಹ್ಯಾಕಾಶ ಅಭಿಯಾನವಾಗುವ ಸಾಧ್ಯತೆಯಿದೆ. ಚಂದ್ರನ ಮಾದರಿಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿರುವ ಈ ಅಭಿಯಾನವು ಭೂಮಿಯ ಮತ್ತು ಚಂದ್ರನ ಕಕ್ಷೆಗಳಲ್ಲಿ ಹಲವಾರು ಡಾಕಿಂಗ್ ಮತ್ತು ಅನ್‌ಡಾಕಿಂಗ್ ಪ್ರಕ್ರಿಯೆಗಳನ್ನು ಒಳಗೊಂಡಿರಲಿದೆ ಎಂದು ವರದಿಯು ತಿಳಿಸಿದೆ.

ಬಾಹ್ಯಾಕಾಶದಲ್ಲಿ ಉಪಗ್ರಹಗಳ ಯಶಸ್ವಿ ಜೋಡಣೆಗಾಗಿ ಇಸ್ರೋವನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಇದು ಮುಂಬರುವ ವರ್ಷಗಳಲ್ಲಿ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಮಹತ್ವದ ಹೆಜ್ಜೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೂ ಸ್ಪೇಡೆಕ್ಸ್‌ನ ಐತಿಹಾಸಿಕ ಯಶಸ್ಸಿಗಾಗಿ ಇಸ್ರೋವನ್ನು ಅಭಿನಂದಿಸಿದ್ದಾರೆ. ‘ನಿಮ್ಮ ಸಮರ್ಪಣೆ ಮತ್ತು ನವೀನತೆಯು ವಿಶ್ವಕ್ಕೆ ಪ್ರೇರಣೆಯನ್ನು ನೀಡುತ್ತಿದೆ ಮತ್ತು ಪ್ರತಿಯೊಬ್ಬ ಭಾರತೀಯನಲ್ಲಿ ಹೆಮ್ಮೆ ಮೂಡಿಸುತ್ತಿದೆ’ ಎಂದು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News