ಮಣಿಪುರ | ವ್ಯಕ್ತಿಯ ಸಾವು ; ಮೈತೈ ಉಗ್ರ ಗುಂಪಿನ 6 ಮಂದಿ ಶಂಕಿತ ಸದಸ್ಯರ ಬಂಧನ
ಗುವಾಹಟಿ: ಮಣಿಪುರದ ಥೌಬಾಲ್ ಜಿಲ್ಲೆಯಲ್ಲಿ ವ್ಯಕ್ತಿಯೋರ್ವನ ಸಾವಿಗೆ ಸಂಬಂಧಿಸಿ ಮೈತೈ ಉಗ್ರ ಸಂಘಟನೆ ಅರಂಬಾಯಿ ಟೆಂಗೋಲ್‌ನ ಆರು ಮಂದಿ ಶಂಕಿತ ಸದಸ್ಯರನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಗಳನ್ನು ಸಾಗೋಲ್ಸೆಮ್ ಚಿಂಗ್‌ಖೈಂಗಂಬ ಸಿಂಗ್ (25), ಚಿಂಗಕ್ಖಮ್ ಸನಟೋಂಬಾ ಸಿಂಗ್ (19), ಸಪಮ್ ಸೋಮರರ್ಜಿತ್ ಸಿಂಗ್ (32), ಮೈಬಮ್ ಬೊಕೆಂಜಿತ್ ಸಿಂಗ್ (24), ಅತೋಕ್ಪಂ ಜಿಬನ್ ಸಿಂಗ್ (30) ಹಾಗೂ ಚಿಂಗಕ್ಖಮ್ ಮಣಿ ಸಿಂಗ್ (41) ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುಲಿಗೆ ಹಣಕ್ಕಾಗಿ ಮುಹಮ್ಮದ್ ನವಾಜ್ (33) ಅವರನ್ನು ಅವರ ನಿವಾಸದಿಂದ ಜನವರಿ 14ರಂದು ಅರಂಬಾಯಿ ಟೆಂಗೋಲ್‌ನ ಶಂಕಿತ ಸದಸ್ಯರು ಅಪಹರಿಸಿದ್ದರು. ಅನಂತರ ಅವರು ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಥೌಬಾಲ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೆಲವು ದಿನಗಳ ಬಳಿಕ ಅವರು ಮೃತಪಟ್ಟಿದ್ದರು. ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಘಟನೆಯಲ್ಲಿ ತಾನು ಭಾಗಿಯಾಗಿಲ್ಲ ಎಂದು ಅರಂಬಾಯಿ ಟೆಂಗೋಲ್ ಪ್ರತಿಪಾದಿಸಿದೆ.