ಮಾನ ಹಾನಿ ದೂರು | ದಿಲ್ಲಿ ನ್ಯಾಯಾಲಯದಿಂದ ಆತಿಶಿ, ಸಂಜಯ್ ಸಿಂಗ್ ಗೆ ನೋಟಿಸ್
ಹೊಸದಿಲ್ಲಿ : ಕಾಂಗ್ರೆಸ್‌ನ ಮಾಜಿ ಸಂಸದ ಸಂದೀಪ್ ದೀಕ್ಷಿತ್ ದಾಖಲಿಸಿದ ಮಾನ ಹಾನಿ ದೂರಿನ ಹಿನ್ನೆಲೆಯಲ್ಲಿ ಇಲ್ಲಿನ ರೋಸ್ ಅವೆನ್ಯೂ ನ್ಯಾಯಾಲಯ ಗುರುವಾರ ದಿಲ್ಲಿ ಮುಖ್ಯಮಂತ್ರಿ ಆತಿಶಿ ಹಾಗೂ ಆಪ್ ಸಂಸದ ಸಂಜಯ್ ಸಿಂಗ್ ಗೆ ನೋಟಿಸು ಜಾರಿ ಮಾಡಿದೆ.
ಸಂದೀಪ್ ದೀಕ್ಷಿತ್ ದಿಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಹೊಸದಿಲ್ಲಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಆರೋಪಿಗೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿರುವ ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ (ಎಸಿಜೆಎಂ) ಪರಾಸ್ ದಲಾಲ್ ಅವರು ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಿದ್ದಾರೆ.
ಹೊಸದಿಲ್ಲಿಯಲ್ಲಿ 2024 ಡಿಸೆಂಬರ್ 26ರಂದು ನಡೆದ ಪತ್ರಿಕಾಗೋಷ್ಠಿಯ ಸಂದರ್ಭ ಆತಿಶಿ ಹಾಗೂ ಸಂಜಯ್ ಸಿಂಗ್ ಅವರು ಮಾಡಿದ ಆರೋಪಕ್ಕೆ ಸಂಬಂಧಿಸಿದ ದೂರು ಇದಾಗಿದೆ. ಮುಂಬರುವ ಚುನಾವಣೆಯಲ್ಲಿ ಆಪ್ ಅನ್ನು ಸೋಲಿಸಲು ಬಿಜೆಪಿಯಿಂದ ಕೋಟ್ಯಂತರ ರೂಪಾಯಿ ಸ್ವೀಕರಿಸಿರುವ ಹಾಗೂ ಬಿಜೆಪಿಯೊಂದಿಗೆ ಪಿತೂರಿ ನಡೆಸಿರುವ ಆರೋಪ ಸೇರಿದಂತೆ ಇಬ್ಬರು ಆಪ್ ನಾಯಕರು ಮಾನ ಹಾನಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೀಕ್ಷಿತ್ ಆರೋಪಿಸಿದ್ದಾರೆ. ದೀಕ್ಷೀತ್ ಅವರ ಪ್ರಕಾರ ಈ ಆರೋಪಗಳು ಆಧಾರ ರಹಿತ ಹಾಗೂ ಯಾವುದೇ ಪುರಾವೆ ಇಲ್ಲದ್ದು.
ಆಪ್ ಚುನಾವಣೆಯಲ್ಲಿ ಗೆಲ್ಲುವ ಅವಕಾಶಗಳನ್ನು ವಿಫಲಗೊಳಿಸಲು ಕಾಂಗ್ರೆಸ್ ಹಾಗೂ ದೀಕ್ಷಿತ್ ಬಿಜೆಪಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಜಯ್ ಸಿಂಗ್ ಅವರೊಂದಿಗೆ ಆತಿಶಿ ಬಹಿರಂಗವಾಗಿ ಪ್ರತಿಪಾದಿಸಿದ್ದರು ಎಂದು ದೀಕ್ಷಿತ್ ಆರೋಪಿಸಿದ್ದಾರೆ. ‘‘ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್‌ಗೆ ನೆರವು ನೀಡುತ್ತಿದೆ’’ ಎಂಬ ಶೀರ್ಷಿಕೆಯಲ್ಲಿ ಆತಿಶಿ ಅವರು ಪತ್ರಿಕಾಗೋಷ್ಠಿಯ ಕಲಾಪವನ್ನು ‘ಎಕ್ಸ್’ನ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದರು ಎಂದು ದೂರಿನಲ್ಲಿ ಗಮನ ಸೆಳೆಯಲಾಗಿದೆ. ಈ ಪೋಸ್ಟ್ 30 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿತ್ತು ಎಂದು ಹೇಳಲಾಗಿದೆ.