ಅಸ್ಸಾಂ | ಪ್ರವಾಹ ಪೀಡಿತ ಗಣಿಯ ಬಳಿ 220ಕ್ಕೂ ಹೆಚ್ಚು ರ‍್ಯಾಟ್ ಹೋಲ್ ಕಲ್ಲಿದ್ದಲು ಗಣಿಗಳ ಪತ್ತೆ
ಗುವಾಹಟಿ: ಜನವರಿ 6ರಂದು ದಿಮಾ ಹಸಾವೊ ಜಿಲ್ಲೆಯಲ್ಲಿನ ಉಮ್ರಾಂಗ್ಸೊ ಬಳಿ ಪ್ರವಾಹ ಪೀಡಿತವಾಗಿದ್ದ ಗಣಿ ಪ್ರದೇಶದಲ್ಲಿ ಸುಮಾರು 220 ಅಕ್ರಮ ರ‍್ಯಾಟ್ ಹೋಲ್ ಕಲ್ಲಿದ್ದಲು ಗಣಿಗಳು ಪತ್ತೆಯಾಗಿವೆ ಎಂದು ಗುರುವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
ಪ್ರವಾಹಪೀಡಿತ ಗಣಿಯಿಂದ ನಾಲ್ವರು ಕಾರ್ಮಿಕರ ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಐವರು ಕಾರ್ಮಿಕರು ಈಗಲೂ ನಾಪತ್ತೆಯಾಗಿದ್ದಾರೆ.
ಕೇಂದ್ರ ಅಸ್ಸಾಂನ ಮಾರಿಗಾಂವ್ ಜಿಲ್ಲೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಂತ ಬಿಸ್ವ ಶರ್ಮ, ಇಂತಹ ತೆರೆದ ಗಣಿಗಳಿಗೆ ಬಿದ್ದು ಪ್ರಾಣಿಗಳೂ ಮೃತಪಟ್ಟಿವೆ ಎಂದು ದಿಮಾ ಹಸಾವೊ ಜಿಲ್ಲಾಡಳಿತ ವರದಿ ನೀಡಿದೆ. ಹೀಗಾಗಿ ಈ ಗಣಿಗಳು ಹೇಗೆ ನಿರ್ಮಾಣವಾದವು ಹಾಗೂ ಯಾವಾಗ ನಿರ್ಮಾಣವಾದವು ಎಂಬುದನ್ನು ಉಪಗ್ರಹ ದತ್ತಾಂಶವನ್ನು ವಿಶ್ಲೇಷಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
“ಈ ಘಟನೆ ಹೇಗಾಯಿತು ಎಂಬ ಕುರಿತು ತನಿಖೆ ನಡೆದ ಸಂದರ್ಭದಲ್ಲಿ ಈ ಗಣಿಗಳು ಪತ್ತೆಯಾಗಿವೆ. ಈ ಗಣಿಗಳು ಹಲವಾರು ಪ್ರಾಣಿಗಳ ಸಾವಿಗೆ ಕಾರಣವಾಗುತ್ತಿರುವುದರಿಂದ, ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಗಣಿ ಯೋಜನೆ ಮತ್ತು ವಿನ್ಯಾಸ ಸಂಸ್ಥೆಯ ನೆರವು ಪಡೆಯಲು ಇದೀಗ ಸರಕಾರ ಯೋಜಿಸುತ್ತಿದೆ. ಆದರೆ, ಇದು ತುಂಬಾ ಕ್ಲಿಷ್ಟಕರ ಕೆಲಸವಾಗಲಿದೆ” ಎಂದೂ ಅವರು ಹೇಳಿದರು.
ಈ ನಡುವೆ, ಸಂಪೂರ್ಣ ಘಟನೆಯ ಕುರಿತು ತನಿಖೆ ನಡೆಸಲು ಗುವಾಹಟಿ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಅನಿಮಾ ಹಝಾರಿಕಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.