ಬ್ರಿಜ್ ಭೂಷಣ್ ವಿರುದ್ಧದ ಪೋಕ್ಸೊ ಕಾಯ್ದೆ ಪ್ರಕರಣವನ್ನು ಮುಕ್ತಾಯಗೊಳಿಸಬೇಕೆ ಎಂಬುದರ ಕುರಿತು ಎಪ್ರಿಲ್ 15ರಂದು ಆದೇಶ ಹೊರಡಿಸಲಿರುವ ನ್ಯಾಯಾಲಯ
ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪೋಕ್ಸೊ ಕಾಯ್ದೆ ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ಮುಕ್ತಾಯ ವರದಿಯನ್ನು ಅಂಗೀಕರಿಸಬೇಕೆ ಬೇಡವೆ ಎಂಬುದರ ಕುರಿತು ಎಪ್ರಿಲ್ 15ರಂದು ದಿಲ್ಲಿ ನ್ಯಾಯಾಲಯವೊಂದು ಆದೇಶ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಗುರುವಾರ ಈ ಪ್ರಕರಣದ ಸಂಬಂಧ ಆದೇಶ ಹೊರಡಿಸಬೇಕಿದ್ದ ಹೆಚ್ಚುವರಿ ಸೆಷನ್ಸ್ ನ್ಯಾ. ಗೋಮತಿ ಮನೋಚಾ ರಜೆಯಲ್ಲಿದ್ದುದರಿಂದ, ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಯಿತು.
ಆಗಸ್ಟ್ 1, 2023ರಂದು ನ್ಯಾಯಾಧೀಶರ ಕೊಠಡಿಯಲ್ಲಿ ನಡೆದಿದ್ದ ವಿಚಾರಣೆಯ ಸಂದರ್ಭದಲ್ಲಿ ದಿಲ್ಲಿ ಪೊಲೀಸರ ತನಿಖೆಯಿಂದ ನನಗೆ ತೃಪ್ತಿಯಾಗಿದ್ದು, ಈ ಸಂಬಂಧ ಮುಕ್ತಾಯ ವರದಿ ಸಲ್ಲಿಸಲು ನನ್ನ ಯಾವುದೇ ಅಭ್ಯಂತರವಿಲ್ಲ ಎಂದು ಅಪ್ತಾಪ್ತ ಕುಸ್ತಿ ಪಟು ಹೇಳಿಕೆ ನೀಡಿದ್ದರು.
ನನ್ನ ಪುತ್ರಿಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸಲು ನಾನು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೆ ಎಂದು ಅಪ್ರಾಪ್ತ ಕುಸ್ತಿಪಟುವಿನ ತಂದೆಯು ವಿಚಾರಣೆಯ ಮಧ್ಯದಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದರಿಂದ, ಜೂನ್ 15, 2023ರಂದು ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ದಿಲ್ಲಿ ಪೊಲೀಸರು ನ್ಯಾಯಾಲಯದೆದುರು ಮುಕ್ತಾಯ ವರದಿಯನ್ನು ಸಲ್ಲಿಸಿದ್ದರು.