ಜ. 21ರಂದು ಶಂಭು ಗಡಿಯಿಂದ ದಿಲ್ಲಿಗೆ ರೈತರ ರ‍್ಯಾಲಿ

Update: 2025-01-16 15:49 GMT

PC : PTI 

ಚಂಡಿಗಢ : ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿರುವ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಖನೌರಿ ಗಡಿಯ ಹರ್ಯಾಣ ಭಾಗದಲ್ಲಿ 111 ರೈತರು ಆಮರಣಾಂತ ಉಪವಾಸ ಮುಷ್ಕರ ಆರಂಭಿಸಿದ ಒಂದು ದಿನದ ಬಳಿಕ ಜನವರಿ 21ರಂದು ಶಂಭು ಗಡಿಯಿಂದ ದಿಲ್ಲಿಗೆ ತಮ್ಮ ರ‍್ಯಾಲಿ ನಡೆಸಲು 101 ರೈತರು ಸಿದ್ಧತೆ ನಡೆಸುತ್ತಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಖಾತರಿ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅವರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ವರ್ಷ101 ರೈತರ ಗುಂಪು ಡಿಸೆಂಬರ್ 6, ಡಿಸೆಂಬರ್ 8 ಹಾಗೂ ಡಿಸೆಂಬರ್ 14ರಂದು (ಜಾಥಾ) ಶಂಭು ಗಡಿಯಿಂದ ದಿಲ್ಲಿಗೆ ರ‍್ಯಾಲಿ ನಡೆಸಲು ಪ್ರಯತ್ನಿಸಿತ್ತು. ಆದರೆ, ಆ ಪ್ರಯತ್ನವನ್ನು ಹರ್ಯಾಣ ಪೊಲೀಸರು ವಿಫಲಗೊಳಿಸಿದ್ದರು ಎಂದು ರೈತ ನಾಯಕ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ)ದ ಸಂಯೋಜಕ ಸರವಣ್ ಸಿಂಗ್ ಪಂಧೇರ್ ಹೇಳಿದ್ದಾರೆ.

ನಿರಂತರ ಪ್ರತಿಭಟನೆಯ ಹೊರತಾಗಿಯೂ ರೈತರ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸುತ್ತಿರುವ ಕೇಂದ್ರ ಸರಕಾರವನ್ನು ಪಂಧೇರ್ ತರಾಟೆಗೆ ತೆಗೆದುಕೊಂಡಿದ್ದಾರೆ.

‘‘ಎಸ್‌ಕೆಎಂ (ರಾಜಕೀಯೇತರ) ಹಾಗೂ ಕೆಎಂಎಂ ಜನವರಿ 21ರಂದು ಶಂಭು ಗಡಿಯಿಂದ ದಿಲ್ಲಿಗೆ 101 ರೈತರ ಗುಂಪು (ಜಾಥಾ) ರ‍್ಯಾಲಿ ಆರಂಭಿಸಲು ನಿರ್ಧರಿಸಿದೆ. ಯಾವುದೇ ಮಾತುತಕೆಯಲ್ಲಿ ತೊಡಗಿಸಿಕೊಳ್ಳಲು ಸರಕಾರಕ್ಕೆ ಇಷ್ಟವಿಲ್ಲ ಎಂಬುದು ನಮ್ಮ ಭಾವನೆ. ಆದುದರಿಂದ ಉಭಯ ಸಂಘಟನೆಗಳು ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿವೆ’’ ಎಂದು ಅವರು ಹೇಳಿದ್ದಾರೆ.

ದಲ್ಲೇವಾಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿ 111 ರೈತರು ಜನವರಿ 15ರಂದು ಅಮರಣಾಂತ ಉಪವಾಸ ಮುಷ್ಕರ ಆರಂಭಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವ ವರೆಗೆ ಉಪವಾಸ ಮುಷ್ಕರವನ್ನು ಮುಂದುವರಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.

ಪಂಜಾಬ್ ಭಾಗದಲ್ಲಿರುವ ಖನೌರಿ ಗಡಿ ಕೇಂದ್ರದಲ್ಲಿ ಕಳೆದ ವರ್ಷ ನವೆಂಬರ್ 26ರಂದು ಆರಂಭವಾದ ಜಗಜೀತ್ ಸಿಂಗ್ ದಲ್ಲೇವಾಲ್ ಅವರ ಉಪವಾಸ ಮುಷ್ಕರ ಇಂದು 52ನೇ ದಿನಕ್ಕೆ ಕಾಲಿರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News