ಉತ್ತರಪ್ರದೇಶ: ಆಸ್ಪತ್ರೆಯಲ್ಲಿ ಮಹಿಳೆಯ ಕಿಡ್ನಿ ‘ಕಳವು’!
ಬುಲಂದ್‌ಶಹರ್/ಮೀರತ್ : 2017ರಲ್ಲಿ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡಿದ ಸಂದರ್ಭ ಆಕೆಯ ಮೂತ್ರಪಿಂಡವನ್ನು ತೆಗೆದುಹಾಕಿದ ಆರೋಪದಲ್ಲಿ ಮೀರತ್‌ನ ಖಾಸಗಿ ಆಸ್ಪತ್ರೆಯೊಂದರ ನಿರ್ದೇಶಕ ಸೇರಿದಂತೆ ಆರು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಗಾಂಗಗಳ ಅಕ್ರಮ ಮಾರಾಟ ದಂಧೆಯಲ್ಲಿ ಆಸ್ಪತ್ರೆ ಶಾಮೀಲಾಗಿದೆಯೆಂದು ಸಂತ್ರಸ್ತೆ ಕವಿತಾ ದೇವಿ ಆರೋಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನ್ಯಾಯಾಲಯದ ಅದೇಶದಂತೆ ಎಫ್‌ಐಆರ್ ದಾಖಲಾಗಿದೆ.
2017ರಲ್ಲಿ ತಾನು ಅಸ್ವಸ್ಥಳಾಗಿದ್ದಾಗ, ತನಗೆ ಮೀರತ್‌ನ ಕೆಎಂಸಿ ಆಸ್ಪತ್ರೆಯ ವೈದ್ಯರೊಬ್ಬರು ಚಿಕಿತ್ಸೆ ನೀಡಿದ್ದರು. ತಾನು ಆಂತರಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ತನಗೆ ಶಸ್ತ್ರಕ್ರಿಯೆ ಅಗತ್ಯವಿರುವುದಾಗಿ ಅವರು ತಿಳಿಸಿದ್ದರು. ಆದುದರಿಂದ ತಾನು 2017ರ ಮೇ 20ರಂದು ಶಸ್ತ್ರಕ್ರಿಯೆಗೆ ಒಳಗಾಗಿದ್ದೆ ಮತ್ತು ನಾಲ್ಕು ದಿನಗಳ ಆನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದೆ. ಆದರೆ ಕೆಲವು ವರ್ಷಗಳ ಬಳಿಕವೂ ಆರೋಗ್ಯವು ಸುಧಾರಿಸದೆ ಇದ್ದುದರಿಂದ 2022ರಲ್ಲಿಯ ತಾನು ವೈದ್ಯಕೀಯ ತಪಾಸಣೆಗೊಳಗಾದಾಗ ನನ್ನ ಎಡ ಕಿಡ್ನಿಯು ನಾಪತ್ತೆಯಾಗಿರುವುದು ತಿಳಿದುಬಂತು ಎಂದು ಕವಿತಾದೇವಿ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ತನ್ನ ಎರಡೂ ಮೂತ್ರಪಿಂಡಗಳಿಗೆ ಯಾವುದೇ ಹಾನಿಯಾಗಿಲ್ಲವೆಂದು ತೋರಿಸುವ ನಕಲಿ ವರದಿಗಳ ಮೂಲಕ ತನ್ನನ್ನು ಆಸ್ಪತ್ರೆಯ ಸಿಬ್ಬಂದಿ ದಾರಿತಪ್ಪಿಸಿದ್ದಾರೆಂದು ಸಂತ್ರಸ್ತ ಮಹಿಳೆ ಆಪಾದಿಸಿದ್ದಾರೆ.
ಈ ಬಗ್ಗೆ ಆಸ್ಪತ್ರೆಯನ್ನು ವಿವರಣೆ ಕೇಳಿದಾಗ ಅಲ್ಲಿನ ಸಿಬ್ಬಂದಿ ತನಗೆ ಹಾಗೂ ತನ್ನ ಪತಿಗೆ ಬೆದರಿಕೆಯೊಡ್ಡಿದ್ದರು. ಒಂದು ವೇಳೆ ಪ್ರಕರಣವನ್ನು ಹಿಂಪಡೆಯದೆ ಇದ್ದಲ್ಲಿ ನಮ್ಮನ್ನು ಕೊಲ್ಲುವುದಾಗಿ ಅವರು ಬೆದರಿಕೆಯೊಡ್ಡಿದ್ದರು ಎಂದು ಮಹಿಳೆ ಆಪಾದಿಸಿದ್ದಾರೆ.
ಮೀರತ್ ಕೆಎಂಸಿ ಆಸ್ಪತ್ರೆಯ ನಿರ್ದೇಶಕ ಡಾ.ಸುನೀಲ್ ಗುಪ್ತಾ ಹಾಗೂ ಆತನ ಪತ್ನಿ ಮತ್ತಿತರರು ಅಕ್ರಮ ಅಂಗಾಂಗ ಮಾರಾಟ ದಂಧೆಯಲ್ಲಿ ಶಾಮೀಲಾಗಿದ್ದಾರೆಂದು ಎಫ್‌ಐಆರ್‌ನಲ್ಲಿ ಆಪಾದಿಸಲಾಗಿದೆ.