ಶ್ರೀಹರಿಕೋಟಾದಲ್ಲಿ ಮೂರನೇ ಉಡಾವಣಾ ಘಟಕ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅಸ್ತು

Update: 2025-01-16 14:44 GMT

Photo: Isro

ಬೆಂಗಳೂರು : ಶ್ರೀಹರಿಕೋಟಾದ ಸತೀಶ್‌ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ಘಟಕ (ಲಾಂಚ್ ಪಾಡ್)ದ ನಿರ್ಮಾಣಕ್ಕೆ ತನಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟದಿಂದ ಹಸಿರುನಿಶಾನೆ ದೊರೆತಿರುವುದಾಗಿ ಇಸ್ರೋ ಗುರುವಾರ ತಿಳಿಸಿದೆ.

3984 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯು ಬಾಹ್ಯಾಕಾಶ ನೌಕೆಗಳ ಉಡಾವಣೆಯಲ್ಲಿ ಭಾರತ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಹಾಗೂ ಭವಿಷ್ಯದ ಮಾನವರನ್ನು ಒಳಗೊಂಡ ಬಾಹ್ಯಾಕಾಶಯಾನಗಳಿಗೆ ಬೆಂಬಲವನ್ನು ನೀಡಲಿದೆ ಎಂದು ಅದು ಹೇಳಿದೆ.

ಮುಂದಿನ ತಲೆಮಾರಿನ ಉಡಾವಣಾ ವಾಹನಗಳು (ಎನ್‌ಜಿಎಲ್‌ವಿ) ಹಾಗೂ ಸೆಮಿಕ್ರಿಯೊಜೆನಿಕ್ ಹಂತದ ಎಲ್‌ವಿಎಂ3 ವಾಹನಗಳನ್ನು ಕೂಡಾ ಇಲ್ಲಿಂದ ಉಡ್ಡಯನಗೊಳಿಸಬಹುದಾಗಿದೆ. 2035ರಲ್ಲಿ ಸ್ವಂತ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಹಾಗೂ 2040ರಲ್ಲಿ ಚಂದ್ರನ ನೆಲದಲ್ಲಿ ಮಾನವನ್ನು ಇಳಿಸುವಂತಹ ಗುರಿಗಳನ್ನು ಭಾರತವು ಹಮ್ಮಿಕೊಂಡಿರುವುದರಿಂದ ಈ ಉಡಾವಣಾ ಘಟಕದ ನಿರ್ಮಾಣವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. 48 ತಿಂಗಳುಗಳೊಳಗೆ ಉಡಾವಣಾ ಘಟಕದ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ವಾಸ್ತವಿಕವಾಗಿ ಭಾರತವು ಒಂದೇ ಒಂದು ಬಾಹ್ಯಾಕಾಶ ಉಡಾವಣಾ ನೆಲೆಯನ್ನು ಹೊಂದಿದೆ. ಮೊದಲನೇ ಉಡಾವಣಾ ಘಟಕವನ್ನು ಪಿಎಸ್‌ಎಲ್‌ವಿ ರಾಕೆಟ್‌ಗಳಿಗಾಗಿ ಸೃಷ್ಟಿಸಲಾಗಿತ್ತು. ಅದನ್ನು ಜಿಎಸ್‌ಎಲ್‌ವಿ ರಾಕೆಟ್‌ಗಳ ಉಡಾವಣೆಗೆ ಬಳಸಲು ಆಗುತ್ತಿಲ್ಲ ಎಂದು ಇಸ್ರೋ ವರಿಷ್ಠ ಸೋಮನಾಥ್ ತಿಳಿಸಿದ್ದಾರೆ. ಎಲ್‌ವಿಎಂ-3 ಸೆಮಿ-ಕ್ರಿಯೋ ಘಟಕವನ್ನು ಹೊಂದಿದ್ದು, ಅಲ್ಲಿಂದಲೇ ಮಾನವಸಹಿತ ಬಾಹ್ಯಾಕಾಶ ನೌಕೆಯನ್ನು ಉಡಾವಣೆಗೊಳಿಸಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News