ಕೆಪಿಸಿಸಿಯಿಂದ ನೋಟಿಸ್ ಕೊಟ್ಟಾಕ್ಷಣ ಅನಾಹುತ ಆಗುವುದಿಲ್ಲ : ಸತೀಶ್ ಜಾರಕಿಹೊಳಿ
ಬೆಂಗಳೂರು : ಕೆಪಿಸಿಸಿಯಿಂದ ನೋಟಿಸ್ ಕೊಟ್ಟಾಕ್ಷಣ ಯಾವುದೇ ದೊಡ್ಡ ಅನಾಹುತ ಆಗುವುದಿಲ್ಲ. ಅದಕ್ಕೆ ಸ್ಪಷ್ಟ ಉತ್ತರವನ್ನು ಅಧ್ಯಕ್ಷರ ಮುಂದೆ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ನೋಟಿಸ್ ಕೊಡುವ ಅಧಿಕಾರ ಅವರಿಗಿದೆ. ಕೊಟ್ಟಿದ್ದರೆ, ನೋಟಿಸ್‍ಗೆ ನಾನು ಉತ್ತರ ಕೊಡುತ್ತೇನೆ. ನೋಟಿಸ್ ಕೊಟ್ಟ ಕೂಡಲೇ ದೊಡ್ಡ ಅನಾಹುತ ಏನೂ ಆಗುವುದಿಲ್ಲ ಎಂದರು.
ಕೆಪಿಸಿಸಿ ಆಕಾಂಕ್ಷಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಈ ಕುರಿತು ವಿಡಿಯೋ ಕೂಡ ನಮ್ಮ ಬಳಿ ಇದೆ. ಆದರೆ, ನನ್ನ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಈಗಾಗಲೇ ನನ್ನ ವರ್ಷನ್ ಅನ್ನು ಸ್ಪಷ್ಟವಾಗಿದೆ. ನನ್ನ ಹೇಳಿಕೆ ಯಾರಿಗೂ ನೋವಾಗುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಹೈಕಮಾಂಡ್ ಭೇಟಿ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಪ್ರಶ್ನೆಗಳು ಒಬ್ಬರಿಂದ ಒಬ್ಬರಿಗೆ ಹೋದಾಗ ಅದು ಬೇರೆಯದೇ ತಿರುವು ಪಡೆಯುತ್ತದೆ. ಈ ರೀತಿಯ ಚರ್ಚೆಗಳಿಂದ ನನಗೂ ಹಾಗೂ ಪಕ್ಷಕ್ಕೂ ಎರಡಕ್ಕೂ ಹಾನಿಯಾಗಲಿದೆ ಎಂದರು.