ಪ್ರಧಾನಮಂತ್ರಿ ಆವಾಸ್ ಯೋಜನೆ | 61,894 ಮನೆಗಳನ್ನು ಪುನರ್ ಪ್ರಾರಂಭಿಸಲು ಸಂಪುಟ ನಿರ್ಧಾರ : ಎಚ್.ಕೆ.ಪಾಟೀಲ್

Update: 2025-01-16 15:26 GMT

ಬೆಂಗಳೂರು : ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)ಯಡಿ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಅನುಷ್ಠಾನಗೊಳಿಸಲು ಅನುಮೋದನೆಯಾಗಿರುವ 1,08,253 ಮನೆಗಳ ಪೈಕಿ ಪ್ರಾರಂಭಿಸದೆ ಸ್ಥಗಿತಗೊಳಿಸಲಾಗಿದ್ದ 61,894 ಮನೆಗಳನ್ನು ಪುನರ್ ಪ್ರಾರಂಭಿಸಲು ಮತ್ತು ಇದಕ್ಕೆ ಅಗತ್ಯವಿರುವ 2,643.67 ಕೋಟಿ ರೂ.ಗಳನ್ನು ಭರಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 61,894 ಮನೆಗಳನ್ನು ಮೂಲಭೂತ ಸೌಕರ್ಯ ಒಳಗೊಂಡಂತೆ ಪುನರ್ ಪ್ರಾರಂಭಿಸಲು 2023ರ ಡಿ.21ರಂದು ಜರುಗಿದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಹೇಳಿದರು.

ಫಲಾನುಭವಿಗಳ ಪಾಲಿನ ವಂತಿಗೆಯ ಪೈಕಿ ಒಂದು ಲಕ್ಷ ರೂ.ಗಳನ್ನು ಮಾತ್ರ ಸಂಗ್ರಹಿಸಿಕೊಂಡು, ಉಳಿದ ಫಲಾನುಭವಿ ವಂತಿಗೆಯನ್ನು ಸರಕಾರದಿಂದ ಭರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಅದರನ್ವಯ ಸ್ಥಗಿತಗೊಳಿಸಿರುವ 61,894 ಮನೆಗಳನ್ನು ಪುನರ್ ಪ್ರಾರಂಭಿಸಲು ಅಗತ್ಯವಿರುವ 2475.76 ಕೋಟಿ ರೂ.ಗಳು ಹಾಗೂ ಮೂಲ ಸೌಕರ್ಯ ಒದಗಿಸಲು ಅಗತ್ಯವಿರುವ 168 ಕೋಟಿ ರೂ.ಗಳು ಸೇರಿ ಒಟ್ಟು 2643.76 ಕೋಟಿ ರೂ.ಗಳನ್ನು ಭರಿಸಲು ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ನ್ಯೂರಾಲಜಿ ಮತ್ತು ನ್ಯೂರೋಸರ್ಜರಿ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿಗಳ ಒಟ್ಟು 33.77 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ. ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ಆವರಣದಲ್ಲಿನ ಕ್ರೀಡಾ ಮತ್ತು ರೋಬೋಟಿಕ್ ಶಸ್ತ್ರ ಚಿಕಿತ್ಸಾ ವಿಭಾಗದ ನೂತನ ಕಟ್ಟಡಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳು, ಇತ್ಯಾದಿಗಳನ್ನು 14 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಅವರು ಹೇಳಿದರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನೆಫ್ರೋ-ಯುರಾಲಜಿ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅನೆಕ್ಸ್ ಕಟ್ಟಡಕ್ಕೆ ಅವಶ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ಪೀಠೋಪಕರಣಗಳನ್ನು 21.86 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ ಅಡಿಯಲ್ಲಿ 238.72 ಕೋಟಿ ರೂ.ಗಳ ಅಂದಾಜು ಮೊತ್ತದ ನಗರ ಪ್ರವಾಹ ಅಪಾಯ ನಿರ್ವಹಣೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಣಯಿಸಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಚಿಕ್ಕಮಗಳೂರು ಜಿಲ್ಲೆ ಕಸಬಾ ಹೋಬಳಿ ಹಿರೇಮಗಳೂರು ಗ್ರಾಮದ ಸರ್ವೇ ನಂ.539 ರಲ್ಲಿರುವ ಒಂದು ಎಕರೆ ಜಮೀನನ್ನು ತಾಜ್ ಕರ್ನಾಟಕ ಹೋಟೆಲ್ಸ್ ಮತ್ತು ರೆಸಾರ್ಟ್ (ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಐಎಚ್‍ಸಿಎಲ್ ನಡುವಿನ ಜಂಟಿ ಉದ್ಯಮ) ಹೆಸರಿಗೆ ಹಕ್ಕು ವರ್ಗಾಯಿಸಲು ಸಚಿವ ಸಂಪುಟವು ನಿರ್ಧರಿಸಿದೆ ಎಂದು ಅವರು ತಿಳಿಸಿದರು.

2024-25ನೇ ಸಾಲಿನ ಆರ್‌ಐಡಿಎಫ್-30 ಯೋಜನೆಯಡಿ ಕೃಷಿ ಮಾರಾಟ ಇಲಾಖೆಯಿಂದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ 7 ಶೀತಲ ಗೃಹಗಳನ್ನು ನಿರ್ಮಿಸುವ ಹಾಗೂ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ನೂತನ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸುವ 118.35 ಕೋಟಿ ರೂ.ಗಳ ಕಾಮಗಾರಿಗಳಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News