ಭದ್ರಾ, ಉತ್ತರೆಗುಡ್ಡ, ಅರಸೀಕೆರೆ, ಬಂಕಾಪುರ ವನ್ಯಜೀವಿ ಧಾಮದ ಪರಸರ ಸೂಕ್ಷ್ಮ ವಲಯಕ್ಕೆ ಸಂಪುಟ ಉಪ ಸಮಿತಿ ತಾತ್ವಿಕ ಒಪ್ಪಿಗೆ

Update: 2025-01-16 15:34 GMT

ಬೆಂಗಳೂರು : ಈಗಾಗಲೇ ಘೋಷಿಸಲಾಗಿರುವ ವನ್ಯಜೀವಿಧಾಮಗಳಿಗೆ ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಸಾರ್ವಜನಿಕರಿಗಾಗಲೀ, ಸ್ಥಳೀಯರಿಗಾಗಲೀ ಯಾವುದೇ ತೊಡಕುಂಟಾಗುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪರಿಸರ ಸೂಕ್ಷ್ಮ ವಲಯಗಳ ಅಧಿಸೂಚನೆ ಹೊರಡಿಸುವ ಪ್ರಸ್ತಾವನೆಗಳನ್ನು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ರಚಿಸಲಾಗಿರುವ ಸಚಿವ ಸಂಪುಟದ ಉಪಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ 4 ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ ಕನಿಷ್ಠ 1 ಕಿ.ಮೀ. ನಿಂದ 10 ಕಿ.ಮೀಟರ್‌ವರೆಗೆ ಪರಿಸರ ಸೂಕ್ಷ್ಮ ವಲಯ ಘೋಷಣೆ ಮಾಡಲಾಗುತ್ತಿದ್ದು, ಜನವಸತಿ ಮತ್ತು ಪಟ್ಟಾ ಜಮೀನು ಇರುವ ಪ್ರದೇಶದಲ್ಲಿ ಕೇವಲ 1 ಕಿ.ಮೀ. ಮಾತ್ರವೇ ಘೋಷಿಸುವ ಕಾರಣ ಇದರಿಂದ ಸ್ಥಳೀಯರಿಗಾಗಲೀ, ರೈತರಿಗಾಗಲೀ ಯಾವುದೇ ತೊಂದರೆ ಆಗುವುದಿಲ್ಲ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ವನ್ಯಜೀವಿ ಧಾಮ, ಕೊಪ್ಪಳದ ಬಂಕಾಪುರ ತೋಳ ವನ್ಯಜೀವಿಧಾಮ, ಚಿತ್ರದುರ್ಗದ ಉತ್ತರೆಗುಡ್ಡ ವನ್ಯಜೀವಿಧಾಮ ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ಕರಡಿ ವನ್ಯಜೀವಿಧಾಮಗಳ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಸಂಬಂಧ ಸಂಪುಟಕ್ಕೆ ಶಿಫಾರಸು ಮಾಡಲು ತಾತ್ವಿಕ ಒಪ್ಪಿಗೆ ನೀಡಲಾಯಿತು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಮಾರ್ಗಸೂಚಿಗಳನ್ವಯ ಪರಿಸರ ಸೂಕ್ಷ್ಮ ವಲಯದಲ್ಲಿ ಉತ್ತೇಜಕ ಚಟುವಟಿಕೆ, ನಿರ್ಬಂಧಿತ ಮತ್ತು ನಿಷೇಧಿತ ಚಟುವಟಿಕೆ ಎಂದು ವರ್ಗೀಕರಿಸಲಾಗಿದೆ. ಉತ್ತೇಜಕ ಚಟುವಟಿಕೆಗಳಲ್ಲಿ ಹಾಲಿ ಇರುವ ಕೃಷಿ, ಸಾವಯವ ಕೃಷಿ, ತೋಟಗಾರಿಕೆ, ಸೌರ ಫಲಕ ಅಳವಡಿಕೆಯಂತಹ ಚಟುವಟಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಈಶ್ವರ್ ಖಂಡ್ರೆ ಹೇಳಿದರು.

ನಿರ್ಬಂಧಿತ ಚಟುವಟಿಕೆಗಳಲ್ಲಿ ಪರಿಸರ ಪ್ರವಾಸೋದ್ಯಮ, ಹೋಂಸ್ಟೇ, ರೆಸಾರ್ಟ್, ಹೋಟೆಲ್, ಶಾಲೆ, ಆಸ್ಪತ್ರೆ, ಸರಕಾರಿ ಕಟ್ಟಡ, ಕಟ್ಟಡ ನಿರ್ಮಾಣ, ವಿದ್ಯುತ್ ಕೇಬಲ್ ಅಳವಡಿಕೆ, ಮೂಲಸೌಕರ್ಯ ಇತ್ಯಾದಿ ಬರುತ್ತದೆ. ಇದಕ್ಕೆ ಪ್ರಾದೇಶಿಕ ಆಯುಕ್ತರ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆದು ಕಾರ್ಯಾಚರಣೆ ಮಾಡಬಹುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ನಿಷೇಧಿತ ಚಟುವಟಿಕೆಗಳಲ್ಲಿ ಅಪಾಯಕಾರಿ ತ್ಯಾಜ್ಯ ಹೊರಹಾಕುವ, ಶಬ್ದ, ವಾಯು ಮಾಲಿನ್ಯ ಉಂಟು ಮಾಡುವ ಕೆಂಪು ಪ್ರವರ್ಗದ ಕೈಗಾರಿಕೆ. ವಾಣಿಜ್ಯ ಗಣಿಗಾರಿಕೆ, ಸಾ ಮಿಲ್ ಸ್ಥಾಪನೆ, ವಾಣಿಜ್ಯ ಉದ್ದೇಶದ ಉರುವಲು ಸಂಗ್ರಹ ಇತ್ಯಾದಿ ಬರುತ್ತದೆ. ಈ ಪ್ರದೇಶಗಳಲ್ಲಿ ಮರ ಕಡಿಯಲು ವೃಕ್ಷ ಸಂರಕ್ಷಣಾ ಕಾಯಿದೆ ಅಡಿ ಪೂರ್ವಾನುಮತಿ ಪಡೆಯಬೇಕಾಗುತ್ತದೆ ಎಂದು ಈಶ್ವರ್ ಖಂಡ್ರೆ ವಿವರ ನೀಡಿದರು.

ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News