ಎಚ್‍ಎಂಟಿ ಸ್ವಾಧೀನದಲ್ಲಿರುವ 14,300 ಕೋಟಿ ರೂ.ಮೌಲ್ಯದ ಅರಣ್ಯ ಭೂಮಿ ಹಿಂಪಡೆಯಲು ಕ್ರಮ : ಎಚ್.ಕೆ.ಪಾಟೀಲ್
ಬೆಂಗಳೂರು: ಎಚ್‍ಎಂಟಿ ಸಂಸ್ಥೆಯ ಸ್ವಾಧೀನದಲ್ಲಿರುವ 14,300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ರಾಜ್ಯ ಸರಕಾರಕ್ಕೆ ಹಿಂಪಡೆಯಲು ಅಗತ್ಯ ಕ್ರಮ ಜರುಗಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಚ್‍ಎಂಟಿ ಕಾರ್ಖಾನೆಯು ಬೆಂಗಳೂರಿನಲ್ಲಿ ಹೊಂದಿರುವ ಪ್ರದೇಶಗಳನ್ನು ಕೇಂದ್ರ ಸರಕಾರದ ಇತರೆ ಸಂಸ್ಥೆಗಳಿಗೆ ಹಸ್ತಾಂತರಿಸಲು ನಿರಾಕ್ಷೇಪಣಾ ಪತ್ರ ನೀಡುವ ಕುರಿತು ಅಧಿಕಾರಿಗಳು ತಮ್ಮದೇ ಆದ ನಿರ್ಧಾರ ತೆಗೆದುಕೊಂಡಿದ್ದರು ಎಂದು ಹೇಳಿದರು.
ಅಲ್ಲದೇ, ಸಚಿವ ಸಂಪುಟದ ಪೂರ್ವಾನುಮತಿ ಅಥವಾ ಉನ್ನತ ಮಟ್ಟದ ಸಮಿತಿಯ ಅನುಮೋದನೆಯನ್ನು ಪಡೆಯದೇ ಸುಪ್ರಿಂ ಕೋರ್ಟ್‍ಗೆ 2015ರಲ್ಲಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹಿಂಪಡೆಯಲು ಸಲ್ಲಿಸಲಾಗಿರುವ ರಾಜ್ಯ ಸರಕಾರದ ಅರ್ಜಿ ಕುರಿತು ಅರಣ್ಯ ಸಚಿವರು ತೆಗೆದುಕೊಂಡಿರುವ ನಿರ್ಣಯಕ್ಕೆ ಸಚಿವ ಸಂಪುಟ ಸಭೆ ಘಟನೋತ್ತರ ಮಂಜೂರಾತಿ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
2015ರಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯಲ್ಲಿ ಹಲವು ಬಾರಿ ಸಭೆಗಳಲ್ಲಿ ಎಚ್‍ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ ಕುರಿತು ಚರ್ಚೆ ನಡೆಸಲಾಗಿತ್ತು. 2018ರ ಜು.17ರಂದು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಯಲ್ಲಿ ಇನ್ನೂ ಹಸಿರು ಹೊದಿಕೆಯನ್ನು ಹೊಂದಿದ ಅರಣ್ಯ ಭೂಮಿಯನ್ನು ಎಚ್‍ಎಂಟಿ ಸಂಸ್ಥೆಯು ಮಾರಾಟ ಮತ್ತು ಹರಾಜು ಮಾಡುತ್ತಿದ್ದು, ಇದು ಬೆಂಗಳೂರಿಗೆ ಜೀವ ಉಳಿಸುವ ಮತ್ತು ಅತ್ಯಗತ್ಯವಾದ ಉಸಿರಾಟಕಾರಕವಾಗಿದೆ (ಬೆಂಗಳೂರಿನಲ್ಲಿ ಹೆಚ್ಚು ಅಗತ್ಯವಿರುವ ಶ್ವಾಸಕೋಶದ ಸ್ಥಳ) ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
2020ರ ಜು.15ರಂದು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಯಲ್ಲಿ ‘1980ಕ್ಕಿಂತ ಮೊದಲು ವಿವಿಧ ಸರಕಾರಿ ಸಂಸ್ಥೆಗಳಿಗೆ ಮಾಡಲಾದ ಪ್ರದೇಶಗಳ ನಿರ್ಬಂಧಗಳ ಕುರಿತು ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪಡೆದ ನಂತರ, ಅಂತಹ ಅರಣ್ಯ ಪ್ರದೇಶಗಳನ್ನು ಡಿನೋಟಿಫೈ ಮಾಡುವ ಪ್ರಸ್ತಾವನೆಯನ್ನು ಸಂಪುಟದ ನಿರ್ಧಾರಕ್ಕಾಗಿ ಸಲ್ಲಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಲಾಗಿದೆ’ ಎಂದು ಸ್ಪಷ್ಟವಾಗಿ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆದರೆ ಅಧಿಕಾರಿಗಳು ತಮ್ಮದೇ ಆದ ನಿರ್ಧಾರವನ್ನು ತೆಗೆದುಕೊಂಡಿದ್ದರು. 2020ರಲ್ಲಿ ವಿವಾದಿತ ಭೂಮಿಯ ಡಿನೊಟಿಫಿಕೇಶನ್ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹಿಂಪಡೆಯುವಂತೆ ರಾಜ್ಯ ಸರಕಾರ ಕೋರಿದೆ. ಅಧಿಕಾರಿಗಳು 14,300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಲು ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು ಕರ್ತವ್ಯ ಲೋಪವಾಗಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
ಎಚ್‍ಎಂಟಿ ಸಂಸ್ಥೆಯು ಸುಮಾರು 160 ಎಕರೆ ಭೂಮಿಯನ್ನು 375 ಕೋಟಿ ರೂ.ಗೆ ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಮಾರಾಟ ಸಂದರ್ಭದಲ್ಲಿ ಅರಣ್ಯ ಇಲಾಖೆ, ಅರಣ್ಯ ಸಚಿವರು ಯಾರಿಂದಲೂ ಅನುಮತಿ ಪಡೆದಿಲ್ಲ. 180 ಎಕರೆ ಅರಣ್ಯ ಭೂಮಿಯನ್ನು ಇದೀಗ ಮಾರಾಟ ಮಾಡಲು ಹೊರಟಿದೆ ಎಂದು ಅವರು ಹೇಳಿದರು.
ಈಗಾಗಲೇ ಮಾರಾಟ ಮಾಡಿರುವ 160 ಎಕರೆ ಅರಣ್ಯ ಭೂಮಿ ಡಿನೋಟಿಫೈ ಆಗಿಲ್ಲ. ಈ ಭೂಮಿಯನ್ನು ಡಿನೋಟಿಫೈ ಮಾಡುವುದಕ್ಕೆ ಸುಪ್ರೀಂ ಕೋರ್ಟ್‍ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು. ಅರಣ್ಯ ಭೂಮಿ ಡಿನೋಟಿಫೈ ಮಾಡಿದರೆ ರಾಜ್ಯಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.