ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಚರ್ಚೆ : ಎಚ್.ಕೆ.ಪಾಟೀಲ್
ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015(ಜಾತಿ ಗಣತಿ)ರ ದತ್ತಾಂಶಗಳ ಅಧ್ಯಯನ ವರದಿಯ ಮುಚ್ಚಿದ ಲಕೋಟೆಯನ್ನು ತೆರೆದು, ಮುಂದಿನ ಸಚಿವ ಸಂಪುಟ ಸಭೆಯ ಮುಂದಿಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ಸಂಪುಟ ಸಭೆಯ ಕಾರ್ಯಸೂಚಿ ಪ್ರಕಾರ ಈ ವಿಷಯದ ಕುರಿತು ಚರ್ಚೆ ನಡೆಸಬೇಕಿತ್ತು. ಆದರೆ, ಮುಖ್ಯಮಂತ್ರಿಯ ಸೂಚನೆ ಹಿನ್ನೆಲೆಯಲ್ಲಿ ಈ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
3352 ನೌಕರರಿಗೆ ವೈದ್ಯಕೀಯ ವಿಮಾ ಸೌಲಭ್ಯ: ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 3352 ಸಿಬ್ಬಂದಿಗಳಿಗೆ(ಇಎಸ್‍ಐ ಸೌಲಭ್ಯ ಹೊಂದಿರುವ ಸಿಬ್ಬಂದಿಗಳನ್ನು ಹೊರತುಪಡಿಸಿ) ಸಾಮೂಹಿಕ ವೈದ್ಯಕೀಯ ವಿಮೆ ಸೌಲಭ್ಯವನ್ನು ಒದಗಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಇದಕ್ಕಾಗಿ ವಾರ್ಷಿಕ 8.34 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಅವರು ಹೇಳಿದರು.
ಇತರೆ ನಿರ್ಣಯಗಳು: ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಫಾರ್ಮ್‍ನಲ್ಲಿ ನೂತನವಾಗಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಒಟ್ಟು 285.89 ಕೋಟಿ ರೂ.ಯೋಜನಾ ವೆಚ್ಚದಲ್ಲಿ ಸ್ಥಾಪನೆ. 5ನೇ ರಾಜ್ಯ ಹಣಕಾಸು ಆಯೋಗದ ಅವಧಿ ಪ್ರಸಕ್ತ ಸಾಲಿನ ಆ.31ರವರೆಗೆ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
2024-25ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ ಆರ್‌ಒಪಿಯಡಿ ಐಇಸಿ ಚಟುವಟಿಕೆಯಡಿ ಅನುಮೋದನೆಗೊಂಡಿರುವ 46.17 ಕೋಟಿ ರೂ.ಗಳ ಸಮಗ್ರ ಕ್ರಿಯಾ ಯೋಜನೆ ಹಾಗೂ ನಾಗರಿಕರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಿಸುವ ‘ಆಶಾಕಿರಣ ಯೋಜನೆ’ಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 13.30 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಹೊರಗುತ್ತಿಗೆ ಆಧಾರದ ಮೇಲೆ ಆರೋಗ್ಯ ಮಿತ್ರರು ಮತ್ತು ಸಿಬ್ಬಂದಿಗಳನ್ನು 53.18 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಎರಡು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಹೊಸದಾಗಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಆಡಳಿತಾತ್ಮ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಕೇಂದ್ರ ಸರಕಾರದ ತಿದ್ದುಪಡಿ ಅಧಿನಿಯಮ ‘ದಿ ಟ್ರನ್ಸ್ ಪ್ಲಾಂಟ್ ಆಫ್ ಹ್ಯೂಮನ್ ಆರ್ಗನ್ಸ್(ತಿದ್ದುಪಡಿ) ಕಾಯ್ದೆ, 2011 ಅನ್ನು ಭಾರತ ಸಂವಿಧಾನ ಅನುಚ್ಛೇದ 252(1)ರನ್ವಯ ರಾಜ್ಯದಲ್ಲಿ ಅಳವಡಿಸಿಕೊಳ್ಳಲು ವಿಧಾನಮಂಡಲದಲ್ಲಿ ಮಂಡಿಸುವ ‘ಅಧಿಕೃತ ನಿರ್ಣಯ’ಕ್ಕೆ ಅನುಮೋದನೆ ನೀಡಲಾಗಿದೆ. ಈ ತಿದ್ದುಪಡಿಯಿಂದ ಅಂಗಾಗ ದಾನದಲ್ಲಿ ನಡೆಯುವ ವಾಣಿಜ್ಯೀಕರಣವನ್ನು ತಡೆಯಬಹುದು. ಅಂಗಗಳ ಕಸಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ರಾಜ್ಯದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಅಸ್ತಿತ್ವದಲ್ಲಿರುವ ಅಂಗ ಕಸಿ(ಜೀವಸಾರ್ಥಕತೆ) ಯೋಜನೆಗೆ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆಯ ಕಸಿ(ಬಿಎಂಟಿ) ಸೇರಿಸಿ ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ಕಟ್ಟಡದ ಎರಡನೆ ಹಂತದ ಕಾಮಗಾರಿಯ 78.10 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಹಾಗೂ ಆಯ್ದ 24 ನಗರಸಭೆಗಳಲ್ಲಿ ಒಟ್ಟು 34 ಆಧುನಿಕ ವಿದ್ಯುತ್/ಅನಿಲ್ ಚಿತಾಗಾರಗಳನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕಿನ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ ಯೋಜನೆಯಡಿಯಲ್ಲಿ ಒಟ್ಟು 136 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 10 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಗಳ ಒಟ್ಟು 211 ಕೋಟಿ ರೂ.ಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒದಗಿಸಲಾಗುತ್ತಿರುವ ಸಿಟಿ ಸ್ಕ್ಯಾನ್ ಮತ್ತು ಎಂ.ಆರ್.ಐ ಸ್ಕ್ಯಾನ್ ಸೇವೆಗಳನ್ನು ಪಿಎಚ್‍ಎಚ್(ಬಿಪಿಎಲ್) ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಒದಗಿಸಲು ನಿರ್ಧರಿಸಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಖಜಿ-ಕಂದಾಯ ಯೋಜನೆಯಡಿಯಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳಿಗೆ 4000 ಕ್ರೋಮ್ ಬುಕ್ ಅಥವಾ ಲ್ಯಾಪ್‍ಟಾಪ್‍ಗಳನ್ನು 20 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ನಿರ್ಧರಿಸಲಾಗಿದೆ. ದಾವಣಗೆರೆ ತಾಲೂಕಿನ ಆನಗೋಡು ಹೋಬಳಿಯ ರುದ್ರನಕಟ್ಟೆ ಗ್ರಾಮದಲ್ಲಿ ಎರಡು ಎಕರೆ ಗೋಮಾಳ ಜಮೀನನ್ನು ಗೊಲ್ಲರ(ಯಾದವ) ಸಂಘಕ್ಕೆ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
‘ಬ್ರ್ಯಾಂಡ್ ಬೆಂಗಳೂರು’ ಯೋಜನೆಯಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಆಸ್ಪತ್ರೆಗಳನ್ನು 413.71 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಪಾಲಿಕೆಯ ಈಗಿರುವ 13 ಹೆರಿಗೆ ಆಸ್ಪತ್ರೆಗಳನ್ನು 30 ಹಾಸಿಗೆ ಮತ್ತು 5 ಆಸ್ಪತ್ರೆಗಳನ್ನು 50 ಹಾಸಿಗೆಗಳ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಹಳೆ ಕಟ್ಟಡಗಳನ್ನು ಕೆಡವಿ 3 ಆಸ್ಪತ್ರೆಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. ಅಸ್ತಿತ್ವದಲ್ಲಿರುವ 852 ಹಾಸಿಗೆಗಳ ಸಾಮರ್ಥ್ಯವನ್ನು 1122 ಬೆಡ್‍ಗಳಿಗೆ ಹೆಚ್ಚಿಸುವುದು ಹಾಗೂ 26 ದಂತ ಚಿಕಿತ್ಸಾಲಯಗಳು, 7 ಫಿಜಿಯೋಥೆರಪಿ ಸೆಂಟರ್‌ಗಳನ್ನು ಸ್ಥಾಪಿಸಲಾಗುವುದು.
-ಎಚ್.ಕೆ.ಪಾಟೀಲ್, ಕಾನೂನು ಸಚಿವ