ಕೆಪಿಎಸ್ಸಿ ಪರೀಕ್ಷೆ ವಿಚಾರದಲ್ಲಿ ಸರಕಾರದ ಹುಡುಗಾಟಿಕೆ ಸರಿಯಲ್ಲ : ವಿಜಯೇಂದ್ರ
ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆ ವಿಚಾರದಲ್ಲಿ ಸರಕಾರದ ಹುಡುಗಾಟಿಕೆ ಸರಿಯಲ್ಲ. ರಾಜ್ಯ ವಿದ್ಯಾರ್ಥಿಗಳ ಒಕ್ಕೂಟವು ಕೆಪಿಎಸ್ಸಿಯಲ್ಲಿ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಖಂಡಿಸಿ ಹೋರಾಟ ನಿರತರಾಗಿದ್ದಾರೆ. ರಾಜ್ಯ ಸರಕಾರಕ್ಕೆ ಬುದ್ಧಿ ಹೇಳುವ ದೃಷ್ಟಿಯಿಂದ ಈ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಕೆಪಿಎಸ್ಸಿ ವಿದ್ಯಾರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಇಂದು ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ʼಪದೇ ಪದೇ ಪರೀಕ್ಷೆ ಮುಂದೂಡುವುದು, ಪ್ರಶ್ನೆಪತ್ರಿಕೆಗಳ ಸೋರಿಕೆ, ಪ್ರಶ್ನೆಪತ್ರಿಕೆಗಳನ್ನು ಇಂಗ್ಲಿಷ್‍ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಸಹಸ್ರಾರು ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಯುತ್ತಿದೆʼ ಎಂದು ವಿವರಿಸಿದರು.
ನಾನು, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು, ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ ಮೊದಲಾದ ಮುಖಂಡರು ಇಲ್ಲಿಗೆ ಬಂದಿದ್ದು, ಹೋರಾಟಕ್ಕೆ ಬೆಂಬಲ ನೀಡಿದ್ದೇವೆ ಎಂದು ತಿಳಿಸಿದರು.
ಜಾತಿಗಣತಿ; ಪಗಡೆ ಆಟವಾಗಿ ಪರಿಗಣಿಸಿದ ಸಿಎಂ :
ಜಾತಿ ಜನಗಣತಿಯನ್ನು ಮುಖ್ಯಮಂತ್ರಿಯವರು ಪಗಡೆ ಆಟ ಎಂದು ಪರಿಗಣಿಸಿದಂತಿದೆ. ಯಾವಾಗ ಅವರ ಸಿಎಂ ಕುರ್ಚಿ ಅಲ್ಲಾಡುತ್ತದೋ ಅವಾಗ ಜಾತಿ ಜನಗಣತಿಯನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳುತ್ತಾರೆ. ಕುರ್ಚಿ ಭದ್ರವಾಗುವ ಹಾಗಿದ್ದಾಗ ಅದನ್ನು ಮುಂದೂಡುವುದಾಗಿ ಹೇಳುತ್ತಾರೆ ಎಂದು ಟೀಕಿಸಿದರು.