ಬೀದರ್ | ಎಟಿಎಂಗೆ ಹಣ ತುಂಬಲು ಬಂದ ಎಸ್‌ಬಿಐ ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ; ಓರ್ವ ಮೃತ್ಯು
ಬೀದರ್: ಎಟಿಎಂಗೆ ತುಂಬಲು ಎಸ್‌ಬಿಐ ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೊರ ಬರುತಿದ್ದಾಗ ಎಟಿಎಂ ಭದ್ರತಾ ಏಜೆನ್ಸಿ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದು ಓರ್ವ ಸಿಬ್ಬಂದಿ ಮೃತಪಟ್ಟಿರುವ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ನ್ಯಾಯಾಲಯದ ಮಧ್ಯದಲ್ಲಿರುವ ಎಸ್‌ಬಿಐ ಬ್ಯಾಂಕ್ ಮುಂಭಾಗ ನಡೆದಿದೆ.
ಚಿದ್ರಿ ಗ್ರಾಮದ ನಿವಾಸಿಯಾದ ಗಿರೀಶ್ (32) ಎಂಬಾತ ಗುಂಡೇಟಿನಿಂದ ಮೃತಪಟ್ಟ ವ್ಯಕ್ತಿ.
ಇಂದು ಬೆಳಿಗ್ಗೆ ಸುಮಾರು 10:30 ಗಂಟೆಗೆ ಎಸ್‌ಬಿಐ ಬ್ಯಾಂಕಿನಿಂದ ಹಣ ತೆಗೆದುಕೊಂಡು ಎಟಿಎಂಗೆ ಹಾಕಲು ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ತೆರಳುತ್ತಿದ್ದರು. ಬೈಕ್ ಮೇಲೆ ಹೆಲ್ಮೆಟ್ ಹಾಕಿಕೊಂಡು ಬಂದ ದುಷ್ಕರ್ಮಿಗಳಿಬ್ಬರು ಸಿಬ್ಬಂದಿಗಳ ಮೇಲೆ ಖಾರದ ಪುಡಿ ಎರಚಿ ಹಣ ದೋಚಲು ಪ್ರಯತ್ನಿಸಿದ್ದಾರೆ. ಹಣ ನೀಡಲು ಸಿಬ್ಬಂದಿ ನಿರಾಕರಿಸಿದಾಗ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಗುಂಡಿನ ದಾಳಿಯಲ್ಲಿ ಗಿರೀಶ್ ಎಂಬಾತ ಮೃತಪಟ್ಟಿದ್ದು, ಶಿವಕುಮಾರ್ ಎಂಬುವವರಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಗೊಂಡಿದ್ದ ಶಿವಕುಮಾರ್ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಪೆಟ್ಟಿಗೆಯಲ್ಲಿದ್ದ 90 ಲಕ್ಷಕ್ಕೂ ಹೆಚ್ಚು ಹಣವನ್ನು ದುಷ್ಕರ್ಮಿಗಳು ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಘಂಟಿ ಸೇರಿದಂತೆ ಹಿರಿಯ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.