ಹನೂರು | ಆನೆ ದಂತ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ
Update: 2025-01-16 11:54 GMT
ಚಾಮರಾಜನಗರ : ಕಾಡಾನೆಯ ದಂತವನ್ನು ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರಬೆಟ್ಟ- ಕೌದಳ್ಳಿ ಬಳಿ ನಡೆದಿದೆ.
ಬಂಧಿತ ಆರೋಪಿಗಳನ್ನು ತಮಿಳುನಾಡಿನ ಶಕ್ತಿವೇಲು(45) ಹಾಗೂ ಹನೂರಿನ ನಾಗೇಂದ್ರಬಾಬು (63) ಎಂದು ಗುರುತಿಸಲಾಗಿದೆ.
ಆರೋಪಿಗಳು ಬೈಕ್‌ನಲ್ಲಿ ಆನೆ ದಂತವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್‌ಐ ಲೋಕೇಶ್, ಸಿಬ್ಬಂದಿಗಳಾದ ಗಿರೀಶ್, ಮಹೇಂದ್ರ ಲಿಯಾಖತ್ ಖಾನ್, ಪರಶುರಾಮ್, ಮಕಂದರ್ ತಂಡ ಕೌದಳ್ಳಿ ಮಹದೇಶ್ವರಬೆಟ್ಟ ಮುಖ್ಯರಸ್ತೆಯಲ್ಲಿ ಬೈಕನ್ನು ತಡೆದು ಚೀಲವನ್ನು ಪರಿಶೀಲನೆ ನಡೆಸಿದಾಗ ಆನೆ ದಂತ ಪತ್ತೆಯಾಗಿದೆ.
ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.