ಅಮಿತ್ ಶಾ ಹೇಳಿಕೆ ಖಂಡಿಸಿ ಕರೆ ನೀಡಿದ್ದ ಚಾಮರಾಜನಗರ ಬಂದ್‌ ಯಶಸ್ವಿ

Update: 2024-12-31 15:36 GMT

ಚಾಮರಾಜನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್.ಅಂಬೇಡ್ಕ‌ರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಖಂಡಿಸಿ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಕರೆ ನೀಡಿದ್ದ ಚಾಮರಾಜನಗರ ಬಂದ್‌ ಯಶಸ್ವಿಯಾಯಿತು.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದ ಪಚ್ಚಪ್ಪ ವೃತ್ತದಲ್ಲಿ ಜಮಾಯಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ಪ್ರತಿಮೆ, ಭಾವಚಿತ್ರ ಇರಿಸಿ ಧರಣಿ ನಡೆಸಿದರು. ಬೈಕ್ ರ್ಯಾಲಿ, ಪಾದಯಾತ್ರೆ, ರಸ್ತೆ ತಡೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪಚ್ಚಪ್ಪ ಸರ್ಕಲ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಡಿವಿಯೇಷನ್ ರಸ್ತೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ ಸರ್ಕಲ್, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ಸರ್ಕಲ್, ಡಿವಿಯೇಷನ್ ರಸ್ತೆ ಮೂಲಕ ಪಚ್ಚಪ್ಪ ಸರ್ಕಲ್‌ನಲ್ಲಿ ಅಂತ್ಯಗೊಂಡಿತು.

ಪಚ್ಚಪ್ಪ ಸರ್ಕಲ್‌ನಲ್ಲಿ ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ, ಮುಖಂಡ ವೆಂಕಟರಮಣಸ್ವಾಮಿ(ಪಾಪು) ಸೇರಿದಂತೆ ಇತರೆ ಹಲವು ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡರು. ಪಚ್ಚಪ್ಪ ಸರ್ಕಲ್‌ನಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು.

ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು : ಸರಕಾರಿ ಕಚೇರಿಗಳು, ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲಿನ ಡೇರಿ, ಬ್ಯಾಂಕ್‌ಗಳನ್ನು ಹೊರತುಪಡಿಸಿ ಉಳಿದಂತೆ ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು ಸೇರಿದಂತೆ ಇತರೆ ಅಂಗಡಿಗಳು ಬಂದ್ ಆಗಿದ್ದವು. ಇದರಿಂದಾಗಿ ಸದಾ ಜನರಿಂದ ಗಿಜಿಗುಡುತ್ತಿದ್ದ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸತ್ತಿ ರಸ್ತೆ, ಬಿ.ರಾಚಯ್ಯ ಜೋಡಿರಸ್ತೆ ಬಿಕೋ ಎನ್ನುತ್ತಿದ್ದವು.

ಕೆಎಸ್ಸಾರ್ಟಿಸಿ ಬಸ್, ಖಾಸಗಿ ಬಸ್ ಸಂಪೂರ್ಣ ಬಂದ್ ಆಗಿತ್ತು. ಉಳಿದಂತೆ ಆಟೋ ಸಂಚಾರ ವಿರಳವಾಗಿತ್ತು.

ಜನರು, ವಿದ್ಯಾರ್ಥಿಗಳ ಪರದಾಟ : ಚಾಮರಾಜನಗರ ಬಂದ್ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಹಾಗೂ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ಶಾಲಾ, ಕಾಲೇಜುಗಳು ಎಂದಿನಂತೆ ಇದ್ದಿದ್ದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ಆಗಮಿಸಿದ್ದರು. ಅಲ್ಲದೇ ಬೆಳಗ್ಗೆ ಬಸ್‌ಗಳು ಓಡಾಡುತ್ತಿದ್ದ ಪರಿಣಾಮ ಜನರು ಕೂಡ ಚಾಮರಾಜನಗರಕ್ಕೆ ಆಗಮಿಸಿದ್ದರು. ಆದರೆ, ಆ ನಂತರ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಚಾಮರಾಜನಗರಕ್ಕೆ ಬಂದಿದ್ದ ಹಾಗೂ ಬೇರೆ ಕಡೆ ತೆರಳಬೇಕಿದ್ದ ಜನರು ಹಾಗೂ ವಿದ್ಯಾರ್ಥಿಗಳು ಬಸ್‌ಗಳಿಲ್ಲದೇ ಪರದಾಡಿದರು. ಕೆಲವರು ಆಟೋಗಳ ಮೂಲಕ ತಮ್ಮ ಊರುಗಳಿಗೆ ತೆರಳಿದ ದೃಶ್ಯ ಕಂಡುಬಂದಿತು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News