ಯಳಂದೂರು | ಪರಿಶಿಷ್ಟರಿಗೆ ಬಾಡಿಗೆಗೆ ಮನೆ : ಸವರ್ಣೀಯರ ಕುಟುಂಬಕ್ಕೆ ಬಹಿಷ್ಕಾರ ಆರೋಪ
ಯಳಂದೂರು : ತಾಲೂಕಿನ ಅಗರ ಗ್ರಾಮದ ಲಿಂಗಾಯತ ಬಡಾವಣೆಯ ಮಠದ ಬೀದಿಯಲ್ಲಿ ವಾಸವಾಗಿರುವ ವೀರಣ್ಣ, ಗೌರಮ್ಮ ಹಾಗೂ ಇವರ ಪುತ್ರ ವಿ.ಸುರೇಶ್ ಎಂಬುವರ ಕುಟುಂಬಕ್ಕೆ ಪರಿಶಿಷ್ಟ ಪಂಗಡದ ನಾಯಕ ಜನಾಂಗಕ್ಕೆ ಮನೆ ಬಾಡಿಗೆಗೆ ನೀಡಿದ್ದಾರೆ ಎಂಬ ಕಾರಣಕ್ಕೆ ಬಹಿಷ್ಕಾರ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದು ವರದಿಯಾಗಿದೆ.
ಈ ಬಗ್ಗೆ ಬಹಿಷ್ಕಾರಕ್ಕೆ ಒಳಗಾದ ವಿ.ಸುರೇಶ್ ಮಾತನಾಡಿ, ನಮ್ಮ ಕುಟುಂಬದಲ್ಲಿ 80 ವರ್ಷ ಮೇಲ್ಪಟ್ಟ ವೀರಣ್ಣ ಇವರ ಪತ್ನಿ ಗೌರಮ್ಮ ಹಾಗೂ ನಾನು (ವಿ. ಸುರೇಶ) ವಾಸವಾಗಿದ್ದೇವೆ.ನಮ್ಮ ಸಹೋದರಿಗೆ ಮದುವೆ ಮಾಡಿಕೊಡಲಾಗಿದೆ. ನಾನು ಇನ್ನೂ ವಿವಾಹವಾಗಿಲ್ಲ. ತಮ್ಮ ಪೂರ್ವಜರ ಕಾಲದಿಂದಲೂ ನಾವು ಇಲ್ಲೇ ವಾಸವಾಗಿದ್ದೇವೆ. ಅಲ್ಲಿಂದ ನಮ್ಮ ಜಾತಿಯ ಸಭೆ, ಪೂಜೆ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಎಲ್ಲರಂತೆ ನಮಗೂ ಆಹ್ವಾನ ನೀಡಲಾಗುತ್ತಿತ್ತು. ಆದರೆ ನಮ್ಮ ಮನೆಯನ್ನು ನಾಯಕ ಜನಾಂಗದ ಕುಟುಂಬಕ್ಕೆ ಬಾಡಿಗೆ ನೀಡಿರುವುದಕ್ಕೆ ನಮ್ಮ ಜಾತಿಯ ಮುಖಂಡರು, ಪರಿಶಿಷ್ಟ ಜನಾಂಗಕ್ಕೆ ನೀನು ಮನೆ ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿ ನಮ್ಮ ಕುಟುಂಬವನ್ನು ಧಾರ್ಮಿಕ ಕಾರ್ಯಕ್ರಮಗಳಿಂದ ದೂರ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಯಳಂದೂರು ತಾಲೂಕಿನ ಅಗರ ಗ್ರಾಮದ ನಿವಾಸಿ ಸುರೇಶ್ ಎಂಬವರು ಸಾಮಾಜಿಕ ಬಹಿಷ್ಕಾರದ ಕುರಿತು ದೂರು ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ನಾನು ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ವಹಿಸುತ್ತೇನೆ. ಈ ಬಗ್ಗೆ ದೂರುದಾರರು ಜಿಲ್ಲಾಧಿಕಾರಿಗೂ ದೂರು ನೀಡಲಿ.
-ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ ಜಿಲ್ಲೆ
ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ , ಅಲ್ಲದೆ ಡಿವೈಎಸ್‌ಪಿಗೂ ದೂರು ನೀಡಿದ್ದೇನೆ. ಠಾಣೆಗೆ ಕೂಡ ನಾನು ಹೋಗಿದ್ದೇನೆ. ಅಲ್ಲಿ ನನ್ನ ಸಮಸ್ಯೆಗೆ ಪರಿಹಾರ ನೀಡುವ ಬದಲು ನನಗೆ ತಿಳುವಳಿಕೆಯನ್ನು ನೀಡಿ ಕಳುಹಿಸಲಾಗಿದೆ. ನಮ್ಮ ಜನಾಂಗದವರು ನಡೆಸುವ ಸಭೆಗಳಲ್ಲಿ ನಾನು ಹೋದಾಗ ನನಗೆ ನಿಂದಿಸಿ, ಸಭೆಯಿಂದ ಹೊರ ಕಳುಹಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಸೂಕ್ತ ನ್ಯಾಯ ದೊರಕಿಸಿಕೊಡಬೇಕು.
-ಸುರೇಶ್, ಸಂತ್ರಸ್ತ