ಚಾಮರಾಜನಗರ | ಸಿಲಿಂಡರ್ ಸ್ಫೋಟ ಪ್ರಕರಣ: ಗಾಯಗೊಂಡಿದ್ದ ಬಾಲಕಿ ಮೃತ್ಯು
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ವರದಿಯಾಗಿದೆ.
ಮೃತ ಬಾಲಕಿಯನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ಪರಿಶಿಷ್ಟ ಜನಾಂಗದ ಬಡಾವಣೆಯ ಹುಣಸೆಮರ ಕಾಲನಿಯ ನಿವಾಸಿಗಳಾದ ನಾಗಮಣಿ ಹಾಗೂ ಕೆಂಪರಾಜು ದಂಪತಿಯ ಪುತ್ರಿ 10ನೇ ತರಗತಿ ವಿದ್ಯಾರ್ಥಿ ಮಮತಾ (16) ಎಂದು ಗುರುತಿಸಲಾಗಿದೆ.
ಈಕೆ ಜ.6ರಂದು ತನ್ನ ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಹಚ್ಚುವ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದಳು. ಗಾಯಗೊಂಡಿದ್ದ ಬಾಲಕಿಯನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 5 ದಿನಗಳಿಂದಲೂ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.