ಹನೂರು| ರಸ್ತೆ ಸಮೀಪ ಕಾಡಾನೆ ಸಂಚಾರ; ಗ್ರಾಮಸ್ಥರಲ್ಲಿ ಆತಂಕ
Update: 2025-04-12 00:03 IST

ಹನೂರು: ಪಟ್ಟಣದಿಂದ ಅಜ್ಜಿಪುರ- ರಾಮಾಪುರ ರಸ್ತೆಯ ಮಾರ್ಗ ಮಧ್ಯದ ಅರಕನಹಳ್ಳ ಬಳಿ ಕಾಡಾನೆಗಳು ರಸ್ತೆ ಸಮೀಪವೇ ತಿರುಗಾಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದಿಂದ ಆಗಮಿಸಿದ 5 ಕಾಡಾನೆಗಳು ರಸ್ತೆಯನ್ನು ದಾಟಿದ್ದು, ಈ ವೇಳೆ ವಾಹನ ಸವಾರರು ವಿಡಿಯೋ ಮಾಡಿದ್ದಾರೆ. ಇನ್ನು ಕೆಲವರು ಆತಂಕದಿಂದ ಅಲ್ಲಿಂದ ತೆರಳಿದ್ದಾರೆ.
ಹಾಡಹಗಲೇ ಕಾಡಾನೆಗಳು ಮುಖ್ಯ ರಸ್ತೆಯಲ್ಲಿ ಓಡಾಡಿರುವುದು ಭಯ ಉಂಟುಮಾಡಿದೆ. ಆದ್ದರಿಂದ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಸೇರಿದಂತೆ ಇನ್ನಿತರ ಪ್ರಾಣಿಗಳು ರಸ್ತೆ ಭಾಗಕ್ಕೆ ಬಾರದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಅಜ್ಜಿಪುರ ಗ್ರಾಮದ ನಿವಾಸಿಗಳು ಮನವಿ ಮಾಡಿದ್ದಾರೆ.