ರಾಜವಂಶಸ್ಥೆ ಪ್ರಮೋದಾದೇವಿ ತಕರಾರು ಅರ್ಜಿ ಬೆನ್ನಲ್ಲೇ ಸಿದ್ದಯ್ಯನಪುರವನ್ನು ಕಂದಾಯ ಗ್ರಾಮವಾಗಿಸಲು ಗ್ರಾಮಸ್ಥರ ಮನವಿ

ಚಾಮರಾಜನಗರ : ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಅವರು ಜಿಲ್ಲಾಧಿಕಾರಿಗೆ ತಕರಾರು ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ, ಸಿದ್ದಯ್ಯನಪುರ ಗ್ರಾಮಸ್ಥರು ಕಂದಾಯ ಗ್ರಾಮವನ್ನಾಗಿಸಲು ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.
ಚಾಮರಾಜನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿದ್ದಯ್ಯನಪುರ ಗ್ರಾಮಸ್ಥರು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರನ್ನು ಭೇಟಿ ಮಾಡಿ, ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಬೇಕು ಎಂದು ಮನವಿ ಸಲ್ಲಿಸಿದರು. ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನಾಂಗದವರು 75 ವರ್ಷಗಳಿಂದಲೂ ವಾಸವಿದ್ದು, ಸುಮಾರು 1000ಕ್ಕಿಂತಲೂ ಹೆಚ್ಚು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾರೆ. ಸರಕಾರ 210 ಕುಟುಂಬಕ್ಕೆ ತಲಾ 4 ಎಕರೆ ಜಮೀನನ್ನು ಮಂಜೂರು ಮಾಡಿ ಕೊಟ್ಟಿದೆ. ಜಯಚಾಮರಾಜೇಂದ್ರ ಒಡೆಯರ್ ನಮಗೆ 1,035 ಎಕರೆ ಭೂಮಿ ದಾನ ಮಾಡಿದ್ದಾರೆ. 1982ರಲ್ಲಿ ಸಚಿವರಾಗಿದ್ದ ಬಿ.ರಾಚಯ್ಯ ಕಾಲದಲ್ಲಿ ಸರಕಾರ ಸಾಗುವಳಿ ಚೀಟಿ ನೀಡಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಈಗ ಮೈಸೂರಿನ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ನಮ್ಮ ಊರಿನ ಸರ್ವೇ ನಂಬರ್ ಗಳನ್ನು ಉಲ್ಲೇಖಿಸಿ ಖಾತೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಇದರಿಂದ ನಮ್ಮ ಗ್ರಾಮಸ್ಥರಿಗೆ ತೊಂದರೆ ಆಗಲಿದೆಯೇ ಎಂದು ಜಿಲ್ಲಾಧಿಕಾರಿ ಬಳಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ತಕರಾರು ಅರ್ಜಿ ಸಂಬಂಧ ಆತಂಕದಲ್ಲಿರುವ ಸಿದ್ದಯ್ಯನಪುರ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅಭಯ ನೀಡಿದ್ದಾರೆ. ಗ್ರಾಮಸ್ಥರಿಂದ ಮನವಿ ಪತ್ರವನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಈಗಾಗಲೇ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ, ಸರಕಾರಿ ಜಾಗ ಎಂದು ಖಚಿತಪಡಿಸಿಕೊಂಡು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಲು ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಪ್ರಮೋದಾದೇವಿ ಒಡೆಯರ್ ಅವರು ತಕರಾರು ಅರ್ಜಿ ಸಲ್ಲಿಸಿದ್ದರೂ ಯಾವುದೇ ಪೂರಕ ದಾಖಲೆಗಳನ್ನು ಒದಗಿಸಿಲ್ಲ. ಆದ್ದರಿಂದ ಗ್ರಾಮಸ್ಥರು ಯಾವುದೇ ಆತಂಕ ಪಡುವುದು ಬೇಡ. ನಿಮ್ಮ ಊರು ಕಂದಾಯ ಗ್ರಾಮಗಳಾಗುವ ಹಂತದಲ್ಲಿದೆ ಎಂದು ಹೇಳಿದರು.