ದೇರಳಕಟ್ಟೆ: ನೆರೆ ನೀರಲ್ಲಿ ಮುಳುಗಿ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕ ಸರಿಪಡಿಸಿದ ಲೈನ್ ಮೆನ್; ವ್ಯಾಪಕ ಪ್ರಶಂಸೆ

Update: 2023-07-05 10:45 GMT

ಉಳ್ಳಾಲ: ಬಿರುಗಾಳಿಗೆ ವಿದ್ಯುತ್ ಕಂಬದ ತಂತಿಗಳು ಪರಸ್ಪರ ಸ್ಪರ್ಶಿಸಿ ಟ್ರಿಪ್ ಆಗಿ ಸ್ಥಳೀಯರಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದ ಸ್ಥಳಕ್ಕೆ ಬಂದ ಮೆಸ್ಕಾಂ ಪವರ್ ಮೆನ್ ನೆರೆ ನೀರಲ್ಲಿ ಮುಳುಗಿ ಕಂಬವನ್ನೇರಿ ತುರ್ತು ದುರಸ್ಥಿ ಕಾರ್ಯ ನಡೆಸಿದ  ಘಟನೆ ಮಂಗಳವಾರ ದೇರಳಕಟ್ಟೆಯ ಬೆರಿಕೆ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಬಿರುಗಾಳಿ,ಮಳೆಗೆ ವಿದ್ಯುತ್ ಕಂಬದ ತಂತಿಗಳು ಪರಸ್ಪರ ಸ್ಪರ್ಶಿಸಿ ಸ್ಥಳೀಯ 40 ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಈ ಬಗ್ಗೆ ಸ್ಥಳೀಯರು ಮೆಸ್ಕಾಂಗೆ ದೂರು ನೀಡಿದ್ದರು.ಸ್ಥಳಕ್ಕೆ ಮೆಸ್ಕಾಂನ ಪವರ್ ಮೆನ್ ವಸಂತ್ ಎಂಬವರು ಭೇಟಿ ನೀಡಿದ್ದಾರೆ.ಆದರೆ ಟ್ರಿಪ್ ಆಗಿದ್ದ ವಿದ್ಯುತ್ ಕಂಬವು ನೆರೆ ನೀರಿಂದ ಸಂಪೂರ್ಣ ಜಲಾವೃತಗೊಂಡಿತ್ತು.ನೆರೆ ನೀರನ್ನು ಲೆಕ್ಕಿಸದ ವಸಂತ್ ಅವರು ಸ್ಥಳೀಯರೋರ್ವರ ಮಾರ್ಗದರ್ಶನದಿಂದ ನೀರಲ್ಲಿ ಮುಳುಗಿ ಒದ್ದೆಯಾಗಿಯೇ ಸಾಗಿ ಕಂಬವನ್ನೇರಿ ತುರ್ತು ದುರಸ್ಥಿ ಕಾರ್ಯ ನಡೆಸಿರುವ ವೀಡಿಯೋ ವೈರಲ್ ಆಗಿದೆ.


ವಿದ್ಯುತ್ ಸರಬರಾಜಲ್ಲಿ ಸ್ವಲ್ಪ ವ್ಯತ್ಯಯವಾದರೂ ಮೆಸ್ಕಾಂ ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕುವವರೇ ಹೆಚ್ಚು.ಆದರೆ ಬಿರು ಗಾಳಿ,ಮಳೆ,ಉರಿ ಬಿಸಿಲನ್ನೂ ಲೆಕ್ಕಿಸದೆ ತುರ್ತು ಕಾರ್ಯಾಚರಣೆ ಮಾಡಿ ಜನರಿಗೆ ವಿದ್ಯುತ್ ಸಂಪರ್ಕ ಒದಗಿಸುವ ಪವರ್ ಮೆನ್ ನ ಬಗ್ಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News