ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ಸಂಸತ್ ಭವನದ ಎದುರು ಧರಣಿ : ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ಬೆಂಗಳೂರು : ಕೇಂದ್ರ ಸರಕಾರವು ವಕ್ಫ್ ತಿದ್ದುಪಡಿ ಮಸೂದೆಯನ್ನು ಯಾವುದೇ ಬದಲಾವಣೆಯಿಲ್ಲದೆ ಸಂಸತ್ತಿನಲ್ಲಿ ಅಂಗೀಕರಿಸಿದರೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೇತೃತ್ವದಲ್ಲಿ ಸಂಸತ್ ಭವನದ ಎದುರು ಧರಣಿ ನಡೆಸಲಾಗುವುದು ಎಂದು ಮಂಡಳಿ ರಾಷ್ಟ್ರೀಯ ವಕ್ತಾರ ಡಾ.ಎಸ್.ಕ್ಯೂ.ಆರ್.ಇಲ್ಯಾಸ್ ತಿಳಿಸಿದರು.
ಸೋಮವಾರ ನಗರದ ದಾರುಲ್ ಉಲೂಮ್ ಸಬೀಲುರ್ರಶಾದ್‌ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಮಸೂದೆ ಕುರಿತು ಪರಿಶೀಲನೆ ನಡೆಸಲು ಲೋಕಸಭಾ ಸ್ಪೀಕರ್ ರಚನೆ ಮಾಡಿದ ಜಂಟಿ ಸಂಸದೀಯ ಸಮಿತಿಗೆ ನಾವು 211 ಪುಟಗಳ ದಾಖಲಾತಿಯನ್ನು ನೀಡಿ ನಮ್ಮ ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಿದ್ದೇವೆ ಎಂದು ಹೇಳಿದರು.
ಈ ಕಾನೂನು ಯಾರಿಗಾಗಿ ಜಾರಿಗೆ ಉದ್ದೇಶಿಸಲಾಗಿದೆಯೋ ಆ ಸಮುದಾಯದವೇ ವಿರೋಧ ಮಾಡುತ್ತಿರುವಾಗ ಯಾವ ಉದ್ದೇಶಕ್ಕಾಗಿ ತರಲಾಗುತ್ತಿದೆ. ಜಂಟಿ ಸಂಸದೀಯ ಸಮಿತಿಯು ಸಂಬಂಧಪಟ್ಟವರ ಜೊತೆ ಚರ್ಚೆ ಮಾಡದೆಯೇ ಇತರರ ಜೊತೆ ಚರ್ಚೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೋರಿಕೆ ಮೇರೆಗೆ ದೇಶದ 3.66 ಕೋಟಿ ಜನ ತಮ್ಮ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ವಕ್ಫ್ ಆಸ್ತಿಗಳು ಸರಕಾರದ ಆಸ್ತಿಗಳಲ್ಲ. ಇದು ಮುಸ್ಲಿಂ ಪೂರ್ವಿಕರು ವಿವಿಧ ಉದ್ದೇಶಗಳಿಗೆ ದಾನ ಮಾಡಿರುವ ಭೂಮಿಯಾಗಿದೆ ಎಂದು ಅವರು ಹೇಳಿದರು.
ಧಾರ್ಮಿಕ ಸ್ಥಳಗಳ ಸಂರಕ್ಷಣಾ ಕಾಯ್ದೆ ಸಂಸತ್ತಿನಲ್ಲಿ ಪಾಸ್ ಮಾಡಲಾಗಿದೆ. 1947ರ ಆಗಸ್ಟ್ 15ರ ಮುಂಚೆ ಯಾವ ಧಾರ್ಮಿಕ ಸ್ಥಳಗಳು ಹೇಗಿದೆಯೋ ಅದು ಹಾಗೆಯೇ ಇರುತ್ತದೆ ಎಂದು ಹೇಳಲಾಗಿತ್ತು. ಆದರೆ, ಇಂದು ಪ್ರತಿ ದಿನ ಒಂದಲ್ಲ ಒಂದು ಮಸೀದಿ ಬಳಿ ಹೋಗಿ ಇದು ಮಂದಿರ ಎಂದು ಸರ್ವೆ ಮಾಡಲು ಹೋಗುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಉತ್ತರಾಖಂಡದಲ್ಲಿ ಅಲ್ಲಿನ ಸರಕಾರ ಸಮಾನ ನಾಗರಿಕ ಸಂಹಿತೆ ಜಾರಿಗೆ ತಂದಿದೆ. ಯಾವುದೇ ರಾಜ್ಯಕ್ಕೆ ಸಮಾನ ನಾಗರಿಕ ಸಂಹಿತೆ ಜಾರಿ ತರಲು ಅಧಿಕಾರವಿಲ್ಲ. ಕೇವಲ ಸಂಸತ್ತಿಗೆ ಮಾತ್ರ ಅದರ ಅಧಿಕಾರವಿದೆ. ಆದುದರಿಂದ, ಉತ್ತರಾಖಂಡ ಸರಕಾರದ ಈ ಕಾಯ್ದೆ ಪ್ರಶ್ನಿಸಿ ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಫೆಲೆಸ್ತೀನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಕೇಂದ್ರ ಸರಕಾರ ಖಂಡನೆ ಮಾಡಬೇಕು ಎಂದು ಇಲ್ಯಾಸ್ ಹೇಳಿದರು.
ಪ್ರವಾದಿ ಮುಹಮ್ಮದ್ (ಸ) ಸೇರಿದಂತೆ ಯಾವುದೇ ಧರ್ಮದ ಪ್ರಮುಖರ ಅವಹೇಳನ ತಡೆಯಲು ಕೇಂದ್ರ ಸರಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾ ಮುಹಮ್ಮದ್ ಫಝ್ಲುರ್ರಹೀಮ್ ಮುಜದ್ದಿದಿ, ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ, ಮುಖಂಡರಾದ ಅಕ್ಬರ್ ಅಲಿ, ಸುಲೇಮಾನ್ ಖಾನ್, ಡಾ.ಮುಜಾಹಿದ್ ಜಮೀಲ್, ಆಸೀಮ್ ಅಫ್ರೋಝ್ ಸೇಠ್, ಸೈಯದ್ ಸೈಫುಲ್ಲಾ, ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.