ಅಜಿತ್ ಪವಾರ್ ರನ್ನು 'ದೇಶದ್ರೋಹಿ' ಎಂದು ಕರೆದು ಪೋಸ್ಟರ್ ಹಾಕಿದ ಶರದ್ ಪವಾರ್ ಬೆಂಬಲಿಗರು
ಹೊಸದಿಲ್ಲಿ: ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮೇಲೆ ಹಿಡಿತ ಸಾಧಿಸುವ ಹೋರಾಟದಲ್ಲಿ ತೊಡಗಿರುವಾಗಲೇ ಪವಾರ್ ಬೆಂಬಲಿಗರು ಅವರ ಸೋದರಳಿಯ ಅಜಿತ್ ಪವಾರ್ ಅವರನ್ನು "ದೇಶದ್ರೋಹಿ" ಎಂದು ಟ್ಯಾಗ್ ಮಾಡಿದ್ದಾರೆ ಹಾಗೂ ಜನರು ಅವರನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.
ದಿಲ್ಲಿಯ ನಿವಾಸದ ಹೊರಗೆ ಶರದ್ ಪವಾರ್ ಬೆಂಬಲಿಗರು ಹಾಕಿರುವ ಪೋಸ್ಟರ್ ನಲ್ಲಿ ಪಕ್ಷದ ಮೇಲೆ ಹಿಡಿತ ಸಾಧಿಸುವ ಅಜಿತ್ ಪವಾರ್ ಅವರ ಕ್ರಮ ಹಾಗೂ ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿಯಲ್ಲಿನ ಮಹಾ ದ್ರೋಹವನ್ನು ಹೋಲಿಸಲಾಗಿದೆ.
"ಇಡೀ ದೇಶವು ಒಬ್ಬರ ನಡುವೆ ಅಡಗಿರುವ ದೇಶದ್ರೋಹಿಗಳನ್ನು ಗಮನಿಸುತ್ತಿದೆ. ಸಾರ್ವಜನಿಕರು ಅಂತಹ ವಂಚಕರನ್ನು ಕ್ಷಮಿಸುವುದಿಲ್ಲ" ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ,
ಶರದ್ ಪವಾರ್ ಮತ್ತು ಅಜಿತ್ ಪವಾರ್ ಅವರನ್ನು ಹೋಲುವ ಬಾಹುಬಲಿ ಪೋಸ್ಟರ್ ಹಾಕಲಾಗಿದೆ. ಇದರಲ್ಲಿ ಅಜಿತ್ ಪವಾರ್, ಶರದ್ ಪವಾರ್ ಬೆನ್ನಿಗೆ ಚೂರಿ ಇರಿಯುವಂತೆ ಚಿತ್ರಿಸಲಾಗಿದೆ. ಎನ್ಸಿಪಿಯ ವಿದ್ಯಾರ್ಥಿ ವಿಭಾಗವು ಹಾಕಿರುವ ಪೋಸ್ಟರ್ ನಲ್ಲಿ ಯಾರ ಹೆಸರೂ ಇಲ್ಲ. ಹ್ಯಾಶ್ ಟ್ಯಾಗ್ನೊಂದಿಗೆ "ಗದ್ದರ್" - ಅಂದರೆ ದೇಶದ್ರೋಹಿ ಎಂದು ಉಲ್ಲೇಖಿಸಲಾಗಿದೆ.
ನಿನ್ನೆ ಮುಂಬೈನಲ್ಲಿ ನಡೆದ ಎರಡು ಮೆಗಾ ಸಭೆಗಳ ನಂತರ, ಎರಡು ಬಣಗಳು ತಮ್ಮನ್ನು ಬೆಂಬಲಿಸುವ ಶಾಸಕರನ್ನು ಹೊಗಳಿದ ನಂತರ, ಶರದ್ ಪವಾರ್ ಅವರು ತಮ್ಮ ಮುಂದಿನ ನಡೆಯನ್ನು ಯೋಜಿಸಲು ಇಂದು ದಿಲ್ಲಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯನ್ನು ನಡೆಸಲಿದ್ದಾರೆ.