ಎಫ್‌ಐಎಚ್ ಹಾಕಿ ವಿಶ್ವ ರ‍್ಯಾಂಕಿಂಗ್ಸ್ ಪ್ರಕಟ: ಭಾರತ ಪುರುಷರ ತಂಡ 5ನೇ ಸ್ಥಾನದಲ್ಲಿ

Update: 2024-12-19 16:51 GMT

PC : PTI 

ಹೊಸದಿಲ್ಲಿ: ಅಂತರ್‌ರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್) ಗುರುವಾರ ಬಿಡುಗಡೆಗೊಳಿಸಿರುವ ಎಫ್‌ಐಎಚ್ ವಿಶ್ವ ರ್ಯಾಂಕಿಂಗ್ಸ್‌ನಲ್ಲಿ, ಭಾರತೀಯ ಪುರುಷರ ಹಾಕಿ ತಂಡವು ಐದನೇ ಸ್ಥಾನವನ್ನು ಗಳಿಸಿದರೆ, ಮಹಿಳಾ ತಂಡವು ಒಂಭತ್ತನೇ ಸ್ಥಾನದಲ್ಲಿ ನೆಲೆಸಿದೆ.

ಭಾರತೀಯ ಪುರುಷರ ಹಾಕಿ ತಂಡವು, 1972ರ ಮ್ಯೂನಿಕ್ ಒಲಿಂಪಿಕ್ಸ್ ಬಳಿಕ, ಬೆನ್ನು ಬೆನ್ನಿಗೆ ಪದಕಗಳನ್ನು ಗೆಲ್ಲುವ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ.

ಒಲಿಂಪಿಕ್ ಚಾಂಪಿಯನ್ ನೆದರ್‌ಲ್ಯಾಂಡ್ಸ್ 3267 ಅಂಕಗಳೊಂದಿಗೆ ರ್ಯಾಂಕಿಂಗ್ಸ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನ 2024-25ರ ಋತುವಿನ ಆರಂಭದಲ್ಲಿ ಪಡೆದ ಮುನ್ನಡೆಗಳೊಂದಿಗೆ, 3139 ಅಂಕಗಳನ್ನು ಪಡೆದಿರುವ ಇಂಗ್ಲೆಂಡ್ ಪಟ್ಟಿಯ ಎರಡನೇ ಸ್ಥಾನದಲ್ಲಿದೆ. 3124 ಅಂಗಳನ್ನು ಗಳಿಸಿರುವ ಬೆಲ್ಜಿಯಮ್ ಮೂರನೇ ಸ್ಥಾನವನ್ನು ತನ್ನದಾಗಿಸಿದೆ.

ಹಾಲಿ ವಿಶ್ವ ಚಾಂಪಿಯನ್ ಜರ್ಮನಿ 3066 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಎಂಟು ಬಾರಿಯ ಒಲಿಂಪಿಕ್ ಚಿನ್ನದ ಪದಕ ವಿಜೇತ ಭಾರತ 2955 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದರೆ, 2814 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯ ಆರನೇ ಸ್ಥಾನದಲ್ಲಿದೆ.

ಅಗ್ರ 10ರ ಪಟ್ಟಿಯಲ್ಲಿ, ನಂತರದ ಸ್ಥಾನಗಳಲ್ಲಿ ಅರ್ಜೆಂಟೀನ (2722), ಸ್ಪೇನ್ (2570), ಫ್ರಾನ್ಸ್ (2116) ಮತ್ತು ಐರ್‌ಲ್ಯಾಂಡ್ (2112) ತಂಡಗಳಿವೆ.

ಮಹಿಳಾ ವಿಶ್ವ ರ್ಯಾಂಕಿಂಗ್ಸ್‌ನಲ್ಲಿ, ಪ್ಯಾರಿಸ್ 2024 ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ನೆದರ್‌ಲ್ಯಾಂಡ್ಸ್ 3689 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಅರ್ಜೆಂಟೀನ, 3203 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 2918 ಅಂಕಗಳನ್ನು ಹೊಂದಿರುವ ಬೆಲ್ಜಿಯಮ್ ಮೂರನೇ ಸ್ಥಾನ ಗಳಿಸಿದೆ.

ಜರ್ಮನಿ (2846) ಮತ್ತು ಆಸ್ಟ್ರೇಲಿಯ (2820) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ.

ಚೀನಾ (2685), ಇಂಗ್ಲೆಂಡ್ (2471), ಸ್ಪೇನ್ (2422), ಭಾರತ (2350) ಮತ್ತು ನ್ಯೂಝಿಲ್ಯಾಂಡ್ (2124) ತಂಡಗಳು ಕ್ರಮವಾಗಿ 6, 7, 8, 9 ಮತ್ತು 10ನೇ ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News