ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆರ್. ಅಶ್ವಿನ್

Update: 2024-12-18 15:19 GMT

ಬ್ರಿಸ್ಬೇನ್: ಆಸ್ಟ್ರೇಲಿಯ ವಿರುದ್ಧ ಬುಧವಾರ ಮೂರನೇ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯವು ಅಂತ್ಯಗೊಂಡ ಬೆನ್ನಿಗೆ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಫ್ ಸ್ಪಿನ್ನರ್ ಆರ್.ಅಶ್ವಿನ್ ತನ್ನ 14 ವರ್ಷಗಳ ಅಂತರ್ರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ತೆರೆ ಎಳೆಯುವುದಾಗಿ ಘೋಷಿಸಿದರು. ಈ ದಿಢೀರ್ ನಿವೃತ್ತಿ ನಿರ್ಧಾರದ ಮೂಲಕ ಸಹ ಆಟಗಾರರು ಸಹಿತ ಕ್ರಿಕೆಟ್ ಜಗತ್ತಿನ ಕ್ರೀಡಾ ಪ್ರೇಮಿಗಳನ್ನ್ನು ದಿಗ್ಬ್ರಮೆಗೊಳಿಸಿದರು.

ಎಲ್ಲ ಮಾದರಿಯ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದು ನನ್ನ ಕೊನೆಯ ದಿನ ಎಂದು ಅಶ್ವಿನ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಈ ವೇಳೆ ರೋಹಿತ್ ಶರ್ಮಾ ಉಪಸ್ಥಿತರಿದ್ದರು.

ಆಸ್ಟ್ರೇಲಿಯದಲ್ಲಿ ಈಗ ನಡೆಯುತ್ತಿರುವ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಮಾತ್ರ ಆಡಿರುವ 38ರ ವಯಸ್ಸಿನ ಅಶ್ವಿನ್ ಅವರು 53 ರನ್ ನೀಡಿ 1 ವಿಕೆಟ್ ಪಡೆದಿದ್ದರು.

3ನೇ ಟೆಸ್ಟ್ ಪಂದ್ಯ ಮುಗಿದ ತಕ್ಷಣ ಡ್ರೆಸ್ಸಿಂಗ್ ರೂಮ್ನಲ್ಲಿ ಭಾವುಕರಾಗಿ ವಿದಾಯದ ಭಾಷಣ ಮಾಡಿದರು. ಆಗ ಪ್ರತಿಯೊಬ್ಬರೂ ಕಣ್ಣೀರಿಟ್ಟರು. ಆಸ್ಟ್ರೇಲಿಯ ತಂಡದಲ್ಲಿರುವ ಅಶ್ವಿನ್ ಸಮಕಾಲೀನರಾದ ನಾಥನ್ ಲಿಯೊನ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ಸಹಿ ಇರುವ ಜರ್ಸಿಯನ್ನು ಅಶ್ವಿನ್ಗೆ ಉಡುಗೊರೆಯಾಗಿ ನೀಡಿದರು.

2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಅಶ್ವಿನ್ ಅವರು ಆ ಪಂದ್ಯದಲ್ಲಿ ಸೀಮಿತ ಅವಕಾಶ ಪಡೆದಿದ್ದ್ದರು. 2015ರ ವಿಶ್ವಕಪ್ನಲ್ಲಿ 8 ಪಂದ್ಯಗಳಲ್ಲಿ 13 ವಿಕೆಟ್ಗಳನ್ನು ಪಡೆದಿದ್ದ ಅಶ್ವಿನ್ ಅವರು ಭಾರತ ತಂಡವು ಸೆಮಿ ಫೈನಲ್ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಭಾರತದ ಎರಡನೇ ಗರಿಷ್ಠ ವಿಕೆಟ್ ಸರದಾರನಾಗಿ ನಿವೃತ್ತಿಯಾಗಿರುವ ಅಶ್ವಿನ್ ಅವರು ಅನಿಲ್ ಕುಂಬ್ಳೆ(619 ವಿಕೆಟ್) ನಂತರ 106 ಪಂದ್ಯಗಳಲ್ಲಿ 537 ವಿಕೆಟ್ಗಳನ್ನು ಪಡೆದಿದ್ದಾರೆ. ಅಶ್ವಿನ್ ಅವರು ಕ್ಲಬ್ ಕ್ರಿಕೆಟ್ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

ಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಅಶ್ವಿನ್ ಅವರ ಶ್ರೇಷ್ಠ ಪ್ರದರ್ಶನವು 2014ರ ವಿಶ್ವಕಪ್ನಲ್ಲಿ ಹೊರಹೊಮ್ಮಿತ್ತು. ಅಲ್ಲಿ ಅವರು ಆಸ್ಟ್ರೇಲಿಯ ವಿರುದ್ಧ 11 ರನ್ ನೀಡಿ 4 ವಿಕೆಟ್ಗಳನ್ನು ಪಡೆದಿದ್ದರು. ಭಾರತ ತಂಡವು ಫೈನಲ್ ತಲುಪುವಲ್ಲಿ ವಿಫಲರಾಗಿದ್ದರೂ ಅಶ್ವಿನ್ ಅವರು ಟೂರ್ನಿಯಲ್ಲಿ ಒಟ್ಟು 11 ವಿಕೆಟ್ಗಳನ್ನು ಉರುಳಿಸಿದ್ದರು.

24ರ ಸರಾಸರಿಯಲ್ಲಿ 537 ಟೆಸ್ಟ್ ವಿಕೆಟ್ಗಳನ್ನು ಪಡೆದಿರುವ ಅಶ್ವ್ವಿನ್ ಭಾರತದ ಓರ್ವ ಶ್ರೇಷ್ಠ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಭಾರತೀಯ ಸ್ಪಿನ್ನರ್ಗಳ ಪೈಕಿ ಅನಿಲ್ ಕುಂಬ್ಳೆ ನಂತರ ಗರಿಷ್ಠ ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ. ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 37 ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದ್ದಾರೆ.

ಆರ್. ಅಶ್ವಿನ್ ವೃತ್ತಿಬದುಕಿನ ಆರಂಭಿಕ ದಿನಗಳಲ್ಲಿ ಮೊದಲ 16 ಪಂದ್ಯಗಳಲ್ಲಿ 9 ಬಾರಿ ಐದು ವಿಕೆಟ್ಗಳ ಗೊಂಚಲು ಪಡೆದು ಮಿಂಚಿದ್ದರು. ಚೆಂಡಿನೊಂದಿಗೆ ಪ್ರಾಬಲ್ಯ ಸಾಧಿಸುವ ಸಾಮರ್ಥ್ಯ ಹೊಂದಿದ್ದ ಅಶ್ವಿನ್ ಅವರು ವೇಗವಾಗಿ 300 ಟೆಸ್ಟ್ ವಿಕೆಟ್ಗಳನ್ನು ಹಾಗೂ ಲೆಜೆಂಡರಿ ಮುತ್ತಯ್ಯ ಮುರಳೀಧರನ್ ನಂತರ ಎರಡನೇ ಅತ್ಯಂತ ವೇಗದಲ್ಲಿ 400 ವಿಕೆಟ್ಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ.

2016-17ರಲ್ಲಿ ಸ್ವದೇಶದಲ್ಲಿ ನಡೆದ ಸರಣಿಯ ವೇಳೆ ಯಶಸ್ಸಿನ ಉತ್ತುಂಗಕ್ಕೇರಿದ್ದ ಅಶ್ವಿನ್ ಅವರು ಭಾರತದ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರವಾಗಿದ್ದರು. 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 27 ವಿಕೆಟ್ಗಳನ್ನು ಉರುಳಿಸಿದ್ದ ಅಶ್ವಿನ್ ಎದುರಾಳಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಪಾರಮ್ಯ ಮೆರೆದಿದ್ದರು.

ಆ ನಂತರ ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಸರಣಿಯಲ್ಲಿ 28 ವಿಕೆಟ್ಗಳನ್ನು ಪಡೆದರೆ, ಬಾಂಗ್ಲಾದೇಶ ವಿರುದ್ಧ ಏಕೈಕ ಪಂದ್ಯದಲ್ಲಿ 6 ವಿಕೆಟ್ಗಳನ್ನು ಪಡೆದಿದ್ದರು. ಆಸ್ಟ್ರೇಲಿಯದ ವಿರುದ್ಧ 4 ಟೆಸ್ಟ್ ಪಂದ್ಯಗಳಲ್ಲಿ 21 ವಿಕೆಟ್ಗಳನ್ನು ಉರುಳಿಸಿದ್ದರು. ಈ ಎಲ್ಲ ಸಾಧನೆಯ ಮೂಲಕ ವಿಶ್ವದ ಪ್ರಮುಖ ಸ್ಪಿನ್ನರ್ಗಳ ಪೈಕಿ ಒಬ್ಬರಾಗಿ ತನ್ನ ಗೌರವ ಹೆಚ್ಚಿಸಿಕೊಂಡಿದ್ದರು.

ಇದು ನನ್ನ ಪಾಲಿಗೆ ಭಾವನಾತ್ಮಕ ಕ್ಷಣ. ಕ್ರಿಕೆಟ್ ಅನ್ನು ತುಂಬಾ ಆನಂದಿಸಿದ್ದೇನೆ. ರೋಹಿತ್ ಶರ್ಮಾ ಹಾಗೂ ಇತರ ತಂಡದ ಸಹ ಆಟಗಾರರೊಂದಿಗೆ ನನಗೆ ಹಲವಾರು ಸ್ಮರಣೀಯ ನೆನಪುಗಳಿವೆ. ನನ್ನ ಈ ವೃತ್ತಿಜೀವನದಲ್ಲಿ ನೆರವಾದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವೆ. ನನ್ನ ತಂಡ, ನನ್ನ ಕೋಚ್ ಬಳಗ ಎಲ್ಲರೂ ಈ ಪಯಣದ ಭಾಗವಾಗಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ವಿಕೆಟ್ ಹಿಂದೆ ನಿಂತು ಕ್ಯಾಚ್ಗಳನ್ನು ಹಿಡಿದು ನನಗೆ ವಿಕೆಟ್ ಗಳಿಸುವಲ್ಲಿ ನೆರವಾಗಿದ್ದಾರೆ. ನನ್ನಲ್ಲಿ ಇನ್ನೂ ಸಾಮರ್ಥ್ಯ ಇದೆ ಎಂದು ನಂಬಿದ್ದೇನೆ. ಬಹುಶಃ ಅದನ್ನು ಕ್ಲಬ್ ಮಟ್ಟದ ಕ್ರಿಕೆಟ್ನಲ್ಲಿ ಪ್ರದರ್ಶಿಸಲಿದ್ದೇನೆ.

ಅಶ್ವಿನ್ ದಾಖಲೆಗಳ ಸಂಪೂರ್ಣ ಪಟ್ಟಿ

 ಆಸ್ಟ್ರೇಲಿಯ ವಿರುದ್ಧದ 3ನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗೊಂಡ ತಕ್ಷಣವೇ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಕ್ರಿಕೆಟ್ನಿಂದ ನಿವೃತ್ತಿಯಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದರು.

ಕೇರಂ ಬಾಲ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್ಗಳನ್ನು ಪಡೆದಿದ್ದಲ್ಲದೆ, 6 ಶತಕಗಳ ಸಹಿತ 3,503 ರನ್ ಗಳಿಸಿದ್ದರು.

116 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 156 ವಿಕೆಟ್ಗಳು ಹಾಗೂ ಟಿ-20 ಕ್ರಿಕೆಟ್ನಲ್ಲಿ 72 ವಿಕೆಟ್ಗಳನ್ನು ಉರುಳಿಸಿದ್ದರು.

ಮಹತ್ವದ ಸಾಧನೆಗಳ ಮೂಲಕ ಅಶ್ವಿನ್ ಭಾರತದ ಸಾರ್ವಕಾಲಿಕ ಶ್ರೇಷ್ಠ ಆಟಗಾರನಾಗಿ ನಿವೃತ್ತಿಯಾಗಿದ್ದಾರೆ.

ಅಶ್ವಿನ್ ಅವರ ವೃತ್ತಿಜೀವನದ ದಾಖಲೆಗಳತ್ತ ಒಂದು ನೋಟ..

► ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 537 ವಿಕೆಟ್ಗಳನ್ನು ಪಡೆದಿದ್ದು, ಅನಿಲ್ ಕುಂಬ್ಳೆ ನಂತರ ಎರಡನೇ ಗರಿಷ್ಠ ವಿಕೆಟ್ ಸರದಾರನಾಗಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಬೌಲರ್ಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.

► ಸ್ವದೇಶದಲ್ಲಿ ಒಟ್ಟು 475 ವಿಕೆಟ್ಗಳನ್ನು ಪಡೆದಿದ್ದಾರೆ. ಅನಿಲ್ ಕುಂಬ್ಳೆ(476) ನಂತರ ಎರಡನೇ ಗರಿಷ್ಠ ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಸಾಧನೆ ಮಾಡಿದ್ದಾರೆ.

►  ಒಟ್ಟು 11 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಆಟಗಾರನೊಬ್ಬನ ಶ್ರೇಷ್ಠ ಸಾಧನೆ ಇದಾಗಿದೆ.

►  98 ಪಂದ್ಯಗಳಲ್ಲಿ 500 ಟೆಸ್ಟ್ ವಿಕೆಟ್ಗಳನ್ನು ಪಡೆದಿರುವ ಅಶ್ವಿನ್ ವೇಗವಾಗಿ ಈ ಸಾಧನೆ ಮಾಡಿದ 2ನೇ ಬೌಲರ್.

► ಒಂದೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಹಾಗೂ ಶತಕವನ್ನು ಸಿಡಿಸಿದ ಭಾರತದ ನಾಲ್ವರು ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ವಿನೂ ಮಂಕಡ್, ಪಾಲಿ ಉಮ್ರಿಗಾರ್ ಹಾಗೂ ರವೀಂದ್ರ ಜಡೇಜ ಈ ಡಬಲ್ ಸಾಧನೆ ಮಾಡಿದ್ದಾರೆ.

►  ಟೆಸ್ಟ್ ಇನಿಂಗ್ಸ್ಗಳಲ್ಲಿ 37 ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ ಈ ಸಾಧನೆ ಮಾಡಿದ ವಿಶ್ವದ 2ನೇ ಬೌಲರ್.

► ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ರನ್ನು ಟೆಸ್ಟ್ ಕ್ರಿಕೆಟ್ನಲ್ಲಿ 13 ಬಾರಿ ಔಟ್ ಮಾಡಿದ್ದಾರೆ. ಬ್ಯಾಟರ್ವೊಬ್ಬನನ್ನು ಹೆಚ್ಚು ಬಾರಿ ಔಟ್ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

ನಿವೃತ್ತಿ ಪ್ರಕಟಿಸಿದ ಬೆನ್ನಿಗೇ ಸ್ವದೇಶಕ್ಕೆ ಹೊರಟ ಅಶ್ವಿನ್

 ಎಲ್ಲ ಮಾದರಿಯ ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪ್ರಕಟಿಸಿದ ಕೆಲವೇ ಗಂಟೆಗಳ ನಂತರ ಆರ್.ಅಶ್ವಿನ್ ಅವರು ಸ್ವದೇಶಕ್ಕೆ ವಾಪಸಾಗಲು ವಿಮಾನ ಏರಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಸದಸ್ಯರಿಂದ ಬೀಳ್ಕೊಡುಗೆ ಸ್ವೀಕರಿಸಿದ ಅಶ್ವಿನ್ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳಸಿದರು.

ಸಮಯದ ಕೊರತೆ ಇದ್ದ ಕಾರಣ ಅಶ್ವಿನ್ರೊಂದಿಗೆ ಔತಣ ಕೂಟ ಏರ್ಪಡಿಸಲು ಸಾಧ್ಯವಾಗಲಿಲ್ಲ.

ಎಲ್ಲರೂ ಅಶ್ವಿನ್ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು. ಅವರಿಗೆ ಭಾವುಕ ಬೀಳ್ಕೋಡುಗೆ ನೀಡಿದರು. ಅವರು ಇಂದು ರಾತ್ರಿಯೇ ಬ್ರಿಸ್ಬೇನ್ನಿಂದ ಹೊರಡಲಿದ್ದು, ಸಮಯದ ಕೊರತೆಯ ಕಾರಣ ಟೀಮ್ ಹೊಟೇಲ್ನಲ್ಲಿ ಸೂಕ್ತ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಲಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.

ನಾಯಕ ರೋಹಿತ್ ಶರ್ಮಾರೊಂದಿಗೆ ಪಂದ್ಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಅಶ್ವಿನ್ ಅವರು ತನ್ನ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದರು. ಆಗ ಡ್ರೆಸ್ಸಿಂಗ್ ರೂಮ್ನಲ್ಲಿ ಭಾವುಕ ಕ್ಷಣಗಳು ಕಂಡುಬಂದವು. ಲೆಜೆಂಡರಿ ಕ್ರಿಕೆಟಿಗ ಮಾತನಾಡುತ್ತಿದ್ದಾಗ ಎಲ್ಲ ಆಟಗಾರರ ಕಣ್ಣಲ್ಲಿ ನೀರು ಕಾಣಿಸಿಕೊಂಡಿತು.

ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಸ್ಪಿನ್ನರ್ ನಾಥನ್ ಲಿಯೊನ್ ಅವರು ಅಶ್ವಿನ್ಗೆ ವಿಶೇಷ ಜೆರ್ಸಿ ನೀಡಿದರು. ಪತ್ರಿಕಾಗೋಷ್ಠಿಯಿಂದ ಹೊರ ನಡೆಯುವ ಮೊದಲು ಅಶ್ವಿನ್ ಅವರು ಎಲ್ಲರನ್ನು ಆಲಿಂಗಿಸಿ, ಕೈ ಕುಲುಕಿದರು.

ಅಶ್ವಿನ್ ವಿದಾಯ: ವಿಶ್ವ ಕ್ರಿಕೆಟ್ ದಿಗ್ಗಜರಿಂದ ಪ್ರತಿಕ್ರಿಯೆ

ಬ್ರಿಸ್ಬೇನ್ನಲ್ಲಿ ಬುಧವಾರ ಡ್ರಾನಲ್ಲಿ ಕೊನೆಗೊಂಡ ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಕ್ರಿಕೆಟ್ ಪಂದ್ಯದ ಅಂತ್ಯದಲ್ಲಿ ಅಶ್ವಿನ್ ತಮ್ಮ ನಿವೃತ್ತಿ ನಿರ್ಧಾರ ಘೋಷಿಸಿದರು. ಅಶ್ವಿನ್ರ ಈ ಹಠಾತ್ ಘೋಷಣೆ ಹಲವರಿಗೆ ಆಘಾತ, ಇನ್ನೂ ಕೆಲವರಿಗೆ ಅಚ್ಚರಿ ಮೂಡಿಸಿತು. ನಿವೃತ್ತಿಯ ಘೋಷಣೆಯ ಬೆನ್ನಲ್ಲೇ ದೇಶ-ವಿದೇಶಗಳ ಕ್ರಿಕೆಟ್ ದಿಗ್ಗಜರು ಅಶ್ವಿನ್ ಆಟವನ್ನು ಸ್ಮರಿಸಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ನಾನು ನಿಮ್ಮೊಂದಿಗೆ 14 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇನೆ. ಆದರೆ ಇಂದು ನೀವು ನಿವೃತ್ತಿ ಘೋಷಿಸಿದಾಗ ನಾನು ಸ್ವಲ್ಪ ಭಾವುಕನಾದೆ. ನಿಮ್ಮೊಂದಿಗೆ ಆಟದಲ್ಲಿ ಕಳೆದ ಕ್ಷಣಗಳು ಸ್ಮತಿ ಪಟಲದ ಮುಂದೆ ಹಾದು ಹೋದವು. ನಿಮ್ಮ ಕೌಶಲ್ಯ ಹಾಗೂ ಪಂದ್ಯ ಗೆಲ್ಲಿಸುವಲ್ಲಿನ ಬದ್ಧತೆ ಅನನ್ಯ. ಭಾರತ ಕ್ರಿಕೆಟ್ ದಾಖಲೆಯಲ್ಲಿ ದಿಗ್ಗಜರಾಗಿ ನೀವು ಸದಾ ಉಳಿಯುತ್ತೀರಿ ಎಂದು ಭಾರತದ ತಂಡದ ಆಟಗಾರ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಯುವ ಬೌಲರ್ ಕ್ರಿಕೆಟ್ ಜೀವನ ಆರಂಭಿಸಿದ ಅಶ್ವ್ವಿನ್ ಅವರ ಆಧುನಿಕ ಕ್ರಿಕೆಟ್ನ ತನಕವೂ ದಿಗ್ಗಜರಾಗಿ ಬೆಳೆದ ಹಾದಿ ಗಮನಿಸಿದರೆ ಅವರ ಸಾಧನೆ ವರ್ಣನಾತೀತವಾಗಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.

ನಾನು ಮುಖ್ಯಕೋಚ್ ಆಗಿದ್ದ ಅವಧಿಯಲ್ಲಿ ತಂಡಕ್ಕೆ ನೀವೊಬ್ಬರು ಬೆಲೆ ಕಟ್ಟಲಾಗದ ಆಸ್ತಿಯಾಗಿದ್ದೀರಿ. ನಿಮ್ಮ ಕೌಶಲ್ಯ ಹಾಗೂ ಪರಿಶ್ರಮದಿಂದ ಪ್ರತಿ ಪಂದ್ಯವನ್ನೂ ಆಡಲು ಹಾಗೂ ನೋಡಲು ಯೋಗ್ಯವಾಗಿಸಿದ್ದ ಆ ನಿಮ್ಮ ಪರಿಶ್ರಮ ಸದಾ ಸ್ಮರಣೀಯ ಎಂದು ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ 700 ವಿಕೆಟ್ ಪಡೆದು ಅತೀವ ಪ್ರೀತಿಯಿಂದಲೇ ಆಟದಲ್ಲಿ ಪಾಲ್ಗೊಳ್ಳುತ್ತಿದ್ದ ನೀವು ಮೈದಾನದಲ್ಲಿ ಅತ್ಯಂತ ಸ್ಪೂರ್ತಿಯುತ ವ್ಯಕ್ತಿ. ನಿಮ್ಮ ಅದ್ಭುತ ಕ್ರಿಕೆಟ್ ಜೀವನಕ್ಕೆ ಅಭಿನಂದನೆಗಳು ಎಂದು ಭಾರತ ತಂಡದ ಮಾಜಿ ಆಟಗಾರ ಹಾಗೂ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಒಬ್ಬ ಟೆಸ್ಟ್ ಕ್ರಿಕೆಟರ್ ಆಗಿ ನಿಮ್ಮ ಮಹತ್ವಾಕಾಂಕ್ಷೆ ಪ್ರಶಂಸನೀಯ. ದಶಕಗಳಿಂದ ಭಾರತ ಕ್ರಿಕೆಟ್ನ ಸ್ಪಿನ್ ವಿಭಾಗದ ಮುಂಚೂಣಿಯ ಬೌಲರ್ ಆಗಿದ್ದು ಅಭಿನಂದನಾರ್ಹ. ನಿಮ್ಮ ಸಾಧನೆಗಳ ಬಗ್ಗೆ ನಿಮಗೆ ಹೆಮ್ಮೆ ಇರಲಿ, ಭವಿಷ್ಯದಲ್ಲಿ ನಿಮ್ಮನ್ನು ಇನ್ನಷ್ಟು ನೋಡುವಂತಾಗಲಿ ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾರೈಸಿದರು.

ನೀವು ಕ್ರಿಕೆಟ್ಗೆ ಬಂದಿದ್ದಕ್ಕೆ ಧನ್ಯವಾದಗಳು. ಇಷ್ಟು ಸುದೀರ್ಘ ಅವಧಿಯ ತನಕ ನೀವು ಅಂತರ್ರಾಷ್ಟ್ರೀಯ ಕ್ರಿಕೆಟ್ನ ಭಾಗವಾಗಿದ್ದೀರಿ. ನಿಮ್ಮ ಪ್ರೌಢಿಮೆ, ನೀವು ಕಲಿಸಿದ ಪಾಠಗಳು, ನೀವು ನೀಡಿದ ಮನರಂಜನೆ ಅನನ್ಯವಾದುದು ಎಂದು ವೆಸ್ಟ್ಇಂಡೀಸ್ನ ಮಾಜಿ ಆಟಗಾರ ಇಯಾನ್ ಬಿಷಪ್ ಹೇಳಿದ್ದಾರೆ.

ಅಶ್ವಿನ್ ಗಳಿಸಿದ ವಿಕೆಟ್ಗಳ ಸಂಖ್ಯೆಗಳೇ ಅವರ ಸಾಧನೆಯನ್ನು ಹೇಳುತ್ತವೆ. ಭಾರತ ತಂಡದಲ್ಲಿ ಅವರೊಬ್ಬ ಅತ್ಯದ್ಭುತ ಬೌಲರ್ ಆಗಿದ್ದರು. ನಮ್ಮ ತಂಡಕ್ಕೆ ಸದಾ ಭಾರತ ಕಡೆಯಿಂದ ಮುಳ್ಳಾಗಿಯೇ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆದ ಸರಣಿಯ ಭಾಗವಾಗಿದ್ದೂ ಸಂತಸದ ವಿಚಾರ ಎಂದು ಆಸ್ಟ್ರೇಲಿಯ ತಂಡದ ಬೌಲರ್ ಮೈಕಲ್ ಸ್ಟಾರ್ಕ್ ಹೇಳಿದ್ದಾರೆ.

ಧನ್ಯವಾದಗಳು ಅಶ್ವಿನ್... ಭಾರತದ ಪರವಾಗಿ ನೀವು ಆಡುವುದನ್ನು ನೋಡಿ ಸಂಭ್ರಮಿಸಿದ್ದೇನೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.

ಒಬ್ಬ ಅದ್ಭುತ ಆಟಗಾರ ನಿವೃತ್ತಿಯಾಗಿದ್ದು, ನಿಮ್ಮ ಅದ್ಭುತ ಕ್ರಿಕೆಟ್ ಜೀವನಕ್ಕಾಗಿ ಅಭಿನಂದನೆಗಳು. ನಿಮ್ಮೊಂದಿಗೆ ಆಟವಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ನನಗೆ ಹೆಮ್ಮೆ ಇದೆ. ತಮಿಳುನಾಡಿನಿಂದ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡಿದ ವಿಶಿಷ್ಟ ಬೌಲರ್ ನೀವು ಎಂದು ಭಾರತದ ಮಾಜಿ ಬ್ಯಾಟರ್ ದಿನೇಶ್ ಕಾರ್ತಿಕ್ ಟ್ವೀಟಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News