ಆಕಾಶ್‌ದೀಪ್‌ಗೆ ನೆರವಾದ ವಿರಾಟ್ ಕೊಹ್ಲಿ ಬ್ಯಾಟ್!
ಬ್ರಿಸ್ಬೇನ್: ಆಕಾಶ್‌ದೀಪ್ ಹಾಗೂ ಜಸ್‌ಪ್ರಿತ್ ಬುಮ್ರಾ ಅವರ ಕೊನೆಯ ವಿಕೆಟ್ ಜೊತೆಯಾಟದಿಂದಾಗಿ ಭಾರತ ತಂಡವು ಬ್ರಿಸ್ಬೇನ್ ಟೆಸ್ಟ್‌ನ 4ನೇ ದಿನದಾಟದಲ್ಲಿ ಫಾಲೋ-ಆನ್‌ನಿಂದ ಬಚಾವ್ ಆಗಿದೆ. ಈ ಜೊತೆಯಾಟವು ಆಸ್ಟ್ರೇಲಿಯದ ಗೆಲುವಿನ ಅವಕಾಶಕ್ಕೆ ಭಾರೀ ಹಾನಿ ಮಾಡಿದೆ.
10ನೇ ವಿಕೆಟ್ ಜೊತೆಯಾಟದ ವೇಳೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಆಕಾಶ್‌ದೀಪ್ ಒತ್ತಡವನ್ನು ಕಡಿಮೆ ಮಾಡಿದರೆ, ಮತ್ತೊಂದೆಡೆ ಬುಮ್ರಾ ಉತ್ತಮ ಸಾಥ್ ನೀಡಿದರು.
ಕಮಿನ್ಸ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿದ ಆಕಾಶ್ ದೀಪ್ ಅವರು ಭಾರತವನ್ನು ಫಾಲೋ ಆನ್‌ನಿಂದ ಪಾರಾಗಿಸಿದರು. ಆಗ ಭಾರತದ ಪಾಳಯದಲ್ಲಿ ಸಂಭ್ರಮಾಚರಣೆ ಕಂಡುಬಂತು.
ಕೆಲವೇ ಎಸೆತಗಳ ನಂತರ ಆಕಾಶ್‌ದೀಪ್ ಅವರು ಕಮಿನ್ಸ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದರು. ದಿನದಾಟದಂತ್ಯಕ್ಕೆ ಆಕಾಶ್ ಔಟಾಗದೆ 27 ರನ್ ಗಳಿಸಿದರು.
ಹೃದಯಸ್ಪರ್ಶಿ ಸಂಗತಿ ಎಂದರೆ ಆಕಾಶ್ ಬಳಸಿರುವ ಬ್ಯಾಟ್, ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿಗೆ ಸೇರಿದ್ದಾಗಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಚೆನ್ನೈ ಹೊಟೇಲ್ ಕೊಠಡಿಯಲ್ಲಿ ಕೊಹ್ಲಿ ಅವರು ಆಕಾಶ್‌ಗೆ ಬ್ಯಾಟ್ ಗಿಫ್ಟ್ ನೀಡಿ ಅಚ್ಚರಿಗೊಳಿಸಿದ್ದರು.
ನಿಮಗೆ ಬ್ಯಾಟ್ ಬೇಕೇ? ಇಗೋ ಈ ಬ್ಯಾಟನ್ನು ನಿನ್ನಲ್ಲಿ ಇಟ್ಟುಕೋ ಎಂದು ಕೊಹ್ಲಿ ಅವರು ಆಕಾಶ್ ದೀಪ್‌ಗೆ ಹೇಳಿದರು.
ಆಗ ದಿಗ್ಬ್ರಮೆಗೊಂಡ ಆಕಾಶ್‌ದೀಪ್ ಅವರು ಕೊಹ್ಲಿ ಅವರಿಂದ ಹೊಚ್ಚ ಹೊಸ ಬ್ಯಾಟ್ ಅನ್ನು ಉತ್ಸಾಹದಿಂದ ಸ್ವೀಕರಿಸಿದ್ದರು. ಬ್ಯಾಟ್‌ಗೆ ಹಸ್ತಾಕ್ಷರ ನೀಡುವಂತೆ ಕೊಹ್ಲಿ ಅವರಲ್ಲಿ ಕೇಳಿಕೊಂಡರು. ಬಳಿಕ ಅವರನ್ನು ತಬ್ಬಿಕೊಂಡರು.