ರಾಹುಲ್- ಜಡೇಜಾ ಅರ್ಧಶತಕ; ಆಕಾಶ್ ದೀಪ್ ಮಿಂಚಿನಾಟದಿಂದ ಫಾಲೊ ಆನ್ ತಪ್ಪಿಸಿಕೊಂಡ ಭಾರತ
Photo:X/BCCI
ಬ್ರಿಸ್ಬೇನ್: ಇಲ್ಲಿನ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ ಮೂರನೆ ಟೆಸ್ಟ್ ಪಂದ್ಯದ ನಾಲ್ಕನೆ ದಿನದಾಟದಂದು ಕೆ.ಎಲ್.ರಾಹುಲ್ (84) ಹಾಗೂ ರವೀಂದ್ರ ಜಡೇಜಾ (77) ಅರ್ಧಶತಕ ಹಾಗೂ ಬುಮ್ರಾರೊಂದಿಗಿನ ಜೊತೆಯಾಟದಲ್ಲಿ ಆಕಾಶ್‌ದೀಪ್ ಸಿಡಿಸಿದ ಮಿಂಚಿನ ಅಜೇಯ 27 ರನ್‌ಗಳ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿರುವ ಭಾರತ ತಂಡ, ಫಾಲೊ ಆನ್ ಭೀತಿಯಿಂದ ಪಾರಾಗಿದೆ.
ನಾಲ್ಕನೆಯ ದಿನಸಾಟವೂ ಸತತ ಮಳೆಯಿಂದ ಅಡಚಣೆಗೊಳಗಾಯಿತು. ಮಂದ ಬೆಳಕಿನಿಂದ ಪಂದ್ಯವನ್ನು ಅಂತ್ಯಗೊಳಿಸಿದಾಗ ಆಕಾಶ್ ದೀಪ್ (27*) ಹಾಗೂ ಜಸ್‌ಪ್ರೀತ್ ಬುಮ್ರಾ (10*) ಕ್ರೀಸಿನಲ್ಲಿದ್ದರು.
ಇದಕ್ಕೂ ಮುನ್ನ, ಫಾಲೊ ಆನ್ ಭೀತಿಗೆ ಒಳಗಾಗಿದ್ದ ಭಾರತ ತಂಡಕ್ಕೆ ಕೆ.ಎಲ್.ರಾಹುಲ್ ಹಾಗೂ ರವೀಂದ್ರ ಜಡೇಜಾರ ಉಪಯುಕ್ತ ಅರ್ಧ ಶತಕಗಳು ಆಸರೆಯಾದವು. ಕಲಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿದ ಕೆ.ಎಲ್.ರಾಹುಲ್, ಕೇವಲ 16 ರನ್‌ಗಳಿಂದ ಶತಕ ವಂಚಿತರಾದರು. ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡಾ ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿ, ತಂಡದ ಮೊತ್ತವನ್ನು ಹಿಗ್ಗಿಸಿದರು.
ಭಾರತ ತಂಡವಿನ್ನೂ 193 ರನ್‌ಗಳ ಹಿನ್ನಡೆಯಲ್ಲಿದ್ದು, ಪಂದ್ಯದ ಕೊನೆಯ ದಿನವಾದ ನಾಳೆ ಯಾವುದೇ ಮ್ಯಾಜಿಕ್ ನಡೆಯದಿದ್ದರೆ ಈ ಟೆಸ್ಟ್ ಪಂದ್ಯ ಬಹುತೇಕ ಡ್ರಾ ಆಗುವ ಸಾಧ್ಯತೆ ಇದೆ.