ಆಸ್ಟ್ರೇಲಿಯ ವಿರುದ್ಧದ 3ನೇ ಟೆಸ್ಟ್: ಅಂತಿಮ ದಿನದಾಟದಲ್ಲಿ ಭಾರತಕ್ಕೆ ಮಳೆ ನೆರವಾಗುವ ಸಾಧ್ಯತೆ
ಬ್ರಿಸ್ಬೇನ್: ಆಸ್ಟ್ರೇಲಿಯ ವಿರುದ್ಧದ 3ನೇ ಟೆಸ್ಟ್ ನಲ್ಲಿ ಬುಮ್ರಾ ಹಾಗೂ ಆಕಾಶ್ ದೀಪ್ ಕೊನೆಯ ವಿಕೆಟ್‌ನಲ್ಲಿ ಚಾರಿತ್ರಿಕ ಜೊತೆಯಾಟ ನಡೆಸಿ ಫಾಲೋ ಆನ್‌ನಿಂದ ಪಾರಾಗಿಸಿದ ಕಾರಣ ಭಾರತ ತಂಡವು ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸುವ ಹೆಚ್ಚಿನ ಅವಕಾಶ ಇದೆ. ಅಂತಿಮ ದಿನದಾಟವಾದ ಬುಧವಾರ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
3ನೇ ಟೆಸ್ಟ್ ಪಂದ್ಯದ ಎಲ್ಲ 4 ದಿನಗಳಲ್ಲಿ ಕೇವಲ 192 ಓವರ್‌ಗಳ ಪಂದ್ಯ ಸಾಧ್ಯವಾಗಿದೆ. ಬುಧವಾರ 2 ಮಿ.ಮೀ ಹಾಗೂ 25 ಮಿ.ಮೀ. ನಡುವೆ ಮಳೆಯಾಗುವ ಮುನ್ಸೂಚನೆ ಲಭಿಸಿದೆ. 4ನೇ ದಿನದಾಟದಲ್ಲೂ ಮಳೆ ಬರುವ ಮುನ್ಸೂಚನೆ ಇದ್ದರೂ ಮಳೆ ಅಡ್ಡಿಯ ನಡುವೆ 58 ಓವರ್‌ಗಳ ಪಂದ್ಯ ನಡೆದಿತ್ತು.
ಬೆಳಗ್ಗೆ ಹಾಗೂ ಮಧ್ಯಾಹ್ನದ ಹೊತ್ತಿಗೆ ಮಳೆ ಸುರಿಯುವ ಹೆಚ್ಚಿನ ಸಾಧ್ಯತೆಯಿದೆ. ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ ಎಂದು ಆಸ್ಟ್ರೇಲಿಯದ ಹವಾಮಾನ ಇಲಾಖೆ ತಿಳಿಸಿದೆ.
ಅಂತಿಮ ದಿನದಾಟದಲ್ಲಿ 98 ಓವರ್‌ಗಳ ಪಂದ್ಯವನ್ನು ನಿಗದಿಪಡಿಸಲಾಗಿದ್ದು, ಬುಮ್ರಾ ಹಾಗೂ ಆಕಾಶ್ ದೀಪ್ ಫಾಲೋ ಆನ್ ಹೇರುವ ಅವಕಾಶವನ್ನು ಕಸಿದುಕೊಂಡ ಕಾರಣ ಆಸ್ಟ್ರೇಲಿಯ ತಂಡವು ಫಲಿತಾಂಶ ಪಡೆಯಲು ಎಲ್ಲ ಪ್ರಯತ್ನವನ್ನು ಮಾಡುವ ಅಗತ್ಯವಿದೆ.
2ನೇ ದಿನದಾಟದಂತೆ ಒಂದು ವೇಳೆ 5ನೇ ದಿನ ಪೂರ್ತಿ ಆಡಲು ಸಾಧ್ಯವಾದರೆ ಆಸ್ಟ್ರೇಲಿಯ ತಂಡವು ಭಾರತದ ಕೊನೆಯ ವಿಕೆಟನ್ನು ಬೇಗನೆ ಉರುಳಿಸಿ ಸುಮರು 20 ಓವರ್‌ಗಳ ಬ್ಯಾಟಿಂಗ್ ಮಾಡಿ ಉಳಿದ 70 ಓವರ್‌ಗಳಲ್ಲಿ ಭಾರತಕ್ಕೆ 300 ರನ್ ಗುರಿ ನೀಡುವ ಅಗತ್ಯವಿದೆ.