260ಕ್ಕೆ ಭಾರತ ಆಲೌಟ್: ಡ್ರಾದತ್ತ ಗಬ್ಬಾ ಟೆಸ್ಟ್
ಬ್ರಿಸ್ಬೇನ್: ಮಳೆಯಿಂದ ಬಾಧಿತವಾದ ಬಾರ್ಡರ್- ಗಾವಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ಸ್ಥಾನ ಪಡೆಯಲು ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು.
ಈ ಹಂತದಲ್ಲಿ ಆರಂಭವಾದ ಮಳೆ ರಭಸ ಪಡೆದುಕೊಂಡಿದ್ದು, ಇಡೀ ದಿನದ ಆಟ ನಷ್ಟವಾಗುವ ಸಾಧ್ಯತೆ ಅಧಿಕವಾಗಿದೆ. ಆದ್ದರಿಂದ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಳ್ಳಲಿದೆ. ಹವಾಮಾನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಕ್ಷೀಣವಾಗಿರುವುದರಿಂದ ನಿಗದಿತ ಅವಧಿಗಿಂತ ಒಂದು ಗಂಟೆ ಮುನ್ನವೇ ಭೋಜನ ವಿರಾಮ ಘೋಷಿಸಲಾಗಿದೆ.
ಐದನೇ ದಿನವಾದ ಬುಧವಾರ ಭಾರತ ತಂಡ ನಿನ್ನೆಯ ಮೊತ್ತಕ್ಕೆ ಎಂಟು ರನ್ ಸೇರಿಸಿ 260ಕ್ಕೆ ಆಲೌಟ್ ಆಯಿತು. ಭಾರತದ ಅಗ್ರ ಕ್ರಮಾಂಕದ ಆಟಗಾರರ ನೀರಸ ಪ್ರದರ್ಶನದ ಬಳಿಕ ಕೆ.ಎಲ್.ರಾಹುಲ್ (84) ಮತ್ತು ರವೀಂದ್ರ ಜಡೇಜಾ (77) ಅವರ ಸಾಹಸದಿಂದ ಭಾರತ ಫಾಲೋ ಆನ್ ತಪ್ಪಿಸಿಕೊಳ್ಳುವ ಹಂತಕ್ಕೆ ಬಂದಿತ್ತು. ಆದರೆ ಫಾಲೋ ಆನ್ ತಪ್ಪಿಸಿದ ಕೀರ್ತಿ ಹತ್ತನೇ ವಿಕೆಟ್ ಗೆ 47 ರನ್ ಗಳನ್ನು ಸೇರಿಸಿದ ಜಸ್ಪ್ರೀತ್ ಭೂಮ್ರಾ- ಆಕಾಶದೀಪ್ ಜೋಡಿಗೆ ಸಲ್ಲುತ್ತದೆ.