ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರವೇಶದ ನಂತರ ವಿವಾದಾತ್ಮಕ ಆದೇಶ ವಾಪಸ್ ಪಡೆದ ತಮಿಳುನಾಡು ರಾಜ್ಯಪಾಲ
ಹೊಸದಿಲ್ಲಿ: ಕಾನೂನು ಸಲಹೆ ಪಡೆಯದೆ ಬಂಧಿತ ರಾಜ್ಯ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ವಜಾಗೊಳಿಸಿರುವ ತಮಿಳುನಾಡು ರಾಜ್ಯಪಾಲ ಆರ್.ಎನ್ .ರವಿ ನಿರ್ಧಾರ ಭಾರೀ ವಿವಾದ ಹಾಗೂ ಚರ್ಚೆಗೆ ಕಾರಣವಾಗಿದೆ. ಸಚಿವರನ್ನು ವಜಾಗೊಳಿಸಿದ ಕೆಲವೇ ಗಂಟೆಗಳ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಪ್ರವೇಶದ ನಂತರ ತಮ್ಮ ನಿರ್ಧಾರವನ್ನು ಬದಲಿಸಿರುವುದು ರಾಜ್ಯಪಾಲ ರವಿ ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಬರೆದಿರುವ ಎರಡು ಪತ್ರಗಳಲ್ಲಿ ಬಹಿರಂಗವಾಗಿದೆ.
ಐದು ಗಂಟೆಗಳ ಅವಧಿಯಲ್ಲಿ ರಾಜ್ಯಪಾಲರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡರು. ವಿವಾದಾತ್ಮಕ ಕ್ರಮದ ಬಗ್ಗೆ ಕಾನೂನು ಅಭಿಪ್ರಾಯವನ್ನು ಪಡೆಯುವುದು "ವಿವೇಕ" ಯುತ ನಡೆ ಎಂದು ಕೇಂದ್ರ ಗೃಹ ಸಚಿವರ ಸಲಹೆಯನ್ನು ಉಲ್ಲೇಖಿಸಿ ರಾಜ್ಯಪಾಲರು ತಮಿಳುನಾಡು ಮುಖ್ಯಮಂತ್ರಿಗೆ ಎರಡನೇ ಪತ್ರ ಬರೆದಿದ್ದಾರೆ.
ಗುರುವಾರ ಸಂಜೆ ರಾಜ್ಯಪಾಲ ರವಿ ಅವರು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಬರೆದ ಐದು ಪುಟಗಳ ಮೊದಲ ಪತ್ರದಲ್ಲಿ, ರಾಜ್ಯ ಸರಕಾರವನ್ನು ಮೀರಿ ಸಚಿವ ಸಂಪುಟದಿಂದ ಸೆಂಥಿಲ್ ಬಾಲಾಜಿಯನ್ನು ಏಕೆ ವಜಾಗೊಳಿಸುತ್ತಿದ್ದೇನೆ ಎಂದು ವಿವರಿಸಿದ್ದರು.
ಐದು ಗಂಟೆಗಳ ನಂತರ ಮಧ್ಯರಾತ್ರಿ ಸಮಯದಲ್ಲಿ ರಾಜ್ಯಪಾಲರು ನಿರ್ಧಾರವನ್ನು ತಡೆಹಿಡಿಯಲಾಗಿದೆ ಎಂದು ಒಂದು ಪುಟದ ಪತ್ರದಲ್ಲಿ ತಿಳಿಸಿದ್ದರು.
"ಅಟಾರ್ನಿ ಜನರಲ್ ಅವರ ಅಭಿಪ್ರಾಯವನ್ನು ಕೂಡ ಪಡೆಯುವುದು ವಿವೇಚನಾಶೀಲವಾಗಿರುತ್ತದೆ ಎಂದು ಗೌರವಾನ್ವಿತ ಕೇಂದ್ರ ಗೃಹ ಸಚಿವರು ನನಗೆ ಸಲಹೆ ನೀಡಿದ್ದಾರೆ. ಅದರಂತೆ ನಾನು ಅವರ ಅಭಿಪ್ರಾಯಕ್ಕಾಗಿ ಅಟಾರ್ನಿ ಜನರಲ್ ಅವರನ್ನು ಸಂಪರ್ಕಿಸುತ್ತಿದ್ದೇನೆ. ಏತನ್ಮಧ್ಯೆ, ಸಚಿವ ತಿರು ವಿ.ಸೆಂಥಿಲ್ ಬಾಲಾಜಿ ಅವರನ್ನು ವಜಾಗೊಳಿಸಿದ ಆದೇಶ ನನ್ನ ಮುಂದಿನ ಆದೇಶದ ತನಕ ತಡೆ ಹಿಡಿಯಲಾಗಿದೆ’ ಎಂದು ರಾಜ್ಯಪಾಲರ ಪತ್ರದಲ್ಲಿ ತಿಳಿಸಲಾಗಿದೆ.