'ಕುಟುಂಬದಲ್ಲಿಯೂ ವೈವಿಧ್ಯತೆ ಇದೆ': ಸಮಾನ ನಾಗರಿಕ ಸಂಹಿತೆ ಬಗ್ಗೆ ಪ್ರಧಾನಿ ಹೇಳಿಕೆಗೆ ಚಿದಂಬರಂ ತಿರುಗೇಟು

ಕುಟುಂಬದಲ್ಲಿಯೂ ವೈವಿಧ್ಯತೆ ಇರುತ್ತದೆ. ಭಾರತದ ಸಂವಿಧಾನವು ಭಾರತದ ಜನರಲ್ಲಿ ವೈವಿಧ್ಯತೆ ಮತ್ತು ಬಹುತ್ವವನ್ನು ಗುರುತಿಸಿದೆ. ಯುಸಿಸಿ ಒಂದು ಮಹತ್ವಾಕಾಂಕ್ಷೆಯಾಗಿದೆ. ಕಾರ್ಯಸೂಚಿ ಹೊಂದಿರುವ ಬಹುಮತದ ಸರಕಾರದಿಂದ ಇದನ್ನು ಜನರ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ

Update: 2023-06-28 06:31 GMT

ಹೊಸದಿಲ್ಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯಾಗುವ ಅಗತ್ಯವಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಬುಧವಾರ ಟೀಕಿಸಿದ್ದು, ಕುಟುಂಬ ಹಾಗೂ ರಾಷ್ಟ್ರದ ನಡುವಿನ ಹೋಲಿಕೆ ಸೂಕ್ತವಲ್ಲ. ಯುಸಿಸಿಯನ್ನು ಯಾರ ಮೇಲೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ಕುಟುಂಬದಲ್ಲಿಯೂ ವೈವಿಧ್ಯತೆ ಇರುತ್ತದೆ. ಭಾರತದ ಸಂವಿಧಾನವು ಭಾರತದ ಜನರಲ್ಲಿ ವೈವಿಧ್ಯತೆ ಮತ್ತು ಬಹುತ್ವವನ್ನು ಗುರುತಿಸಿದೆ. ಯುಸಿಸಿ ಒಂದು ಮಹತ್ವಾಕಾಂಕ್ಷೆಯಾಗಿದೆ. ಕಾರ್ಯಸೂಚಿ ಹೊಂದಿರುವ ಬಹುಮತದ ಸರಕಾರದಿಂದ ಇದನ್ನು ಜನರ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ‘’ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು.

"ಒಂದು ಕುಟುಂಬದ ವಿವಿಧ ಸದಸ್ಯರಿಗೆ ವಿಭಿನ್ನ ನಿಯಮಗಳು" ಕೆಲಸ ಮಾಡುವುದಿಲ್ಲ ಹಾಗೂ ದೇಶವು ಎರಡು ಕಾನೂನುಗಳಿಂದ ನಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಮಂಗಳವಾರ ಭೋಪಾಲ್ ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು. 

ಏಕರೂಪ ನಾಗರಿಕ ಸಂಹಿತೆಯ ಕುರಿತು ಪ್ರಧಾನಿ ಮೋದಿಯವರ ಹೇಳಿಕೆಯು ಹಣದುಬ್ಬರ, ನಿರುದ್ಯೋಗ, ದ್ವೇಷದ ಅಪರಾಧಗಳು ಹಾಗೂ ತಾರತಮ್ಯದಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಕರೆದ ಚಿದಂಬರಂ, ಮತದಾರರನ್ನು ಧ್ರುವೀಕರಿಸಲು ಹಾಗೂ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ, ಯುಸಿಸಿಯನ್ನು ಜಾರಿಗೆ ತರಲು ಯತ್ನಿಸುತ್ತಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News