ಮಂಗಳೂರು ವಿವಿಯಲ್ಲಿ ಬೋಧನಾ ಶುಲ್ಕ ಏರಿಕೆ ವಿಷಾದನೀಯ: ಎಐಡಿಎಸ್ಓ
ಮಂಗಳೂರು: ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಯ ಬೋಧನಾ ಶುಲ್ಕವನ್ನು ಹೆಚ್ಚಿಸಿರುವುದನ್ನು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಖಂಡನೆ ವ್ಯಕ್ತಪಡಿಸಿದೆ.
ವಿಶ್ವವಿದ್ಯಾನಿಲಯದಲ್ಲಿ ಹಣ ಕಾಸಿನ ಅಭಾವದ ನೆಪವೊಡ್ಡಿ ವಿದ್ಯಾರ್ಥಿಗಳ ಮೇಲೆ ಬೋಧನಾ ಶುಲ್ಕ ಏರಿಕೆಯ ಹೊರೆಯನ್ನು ಹಾಕಿರುವುದು ವಿಷಾದನೀಯ. ಯಾವ ಉದ್ದೇಶದೊಂದಿಗೆ ವಿಶ್ವವಿದ್ಯಾಲಯಗಳು ಸ್ಥಾಪಿತವಾದವೋ, ಸಾರ್ವಜನಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಖಾತ್ರಿ ಮಾಡುವ ಬದಲಾಗಿ, ಇಂದು ಶುಲ್ಕವನ್ನು ಹೆಚ್ಚಿಸುವ ಮೂಲಕ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಗುಳಿಯುವಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ವಿವಿ ನಿರ್ವಹಣೆಯ ಹಣವನ್ನು ವಿದ್ಯಾರ್ಥಿಗಳ ಶುಲ್ಕದ ಮೂಲಕ ಪಡೆಯುವ ಪ್ರಕ್ರಿಯೆ ಜರಗುತ್ತಿದ್ದು, ಈ ಮೂಲಕ ವಿದ್ಯಾರ್ಥಿ ವಿರೋಧಿ - ಶಿಕ್ಷಣ ವಿರೋಧಿ ಧೋರಣೆಯನ್ನು ಸರ್ಕಾರಗಳು ತೋರುತ್ತಿರುವುದು ಬಹಳ ವಿಷಾದನೀಯ ಸಂಗತಿ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಿದ್ಯಾರ್ಥಿ ವಿರೋಧಿ - ಬಡವರ ವಿರೋಧಿ ಧೋರಣೆಯನ್ನು ತೆಗೆದುಕೊಳ್ಳದೆ, ಸರ್ಕಾರವು ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ತೆಗೆದುಕೊಂಡು, ವಿಶ್ವವಿದ್ಯಾನಿಲಯಕ್ಕೆ ಅವಶ್ಯವಿರುವ ಅನುದಾನವನ್ನು ನೀಡಬೇಕು ಎಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯು ಆಗ್ರಹಿಸಿದೆ.
ಯಾವುದೇ ಕಾರಣಕ್ಕೂ ಸರ್ಕಾರಿ ವಿವಿಗಳು ವಿದ್ಯಾರ್ಥಿಗಳ ಶುಲ್ಕದಲ್ಲಿ ನಿರ್ವಹಣೆಯಾಗಬಾರದು ಎಂದು ಸಂಘಟನೆ ಒತ್ತಾಯಿಸುತ್ತದೆ ಎಂದು ಎಐಡಿಎಸ್ಓ ಜಿಲ್ಲಾ ಸಂಚಾಲಕ ವಿನಯ್ ಚಂದ್ರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.