ಡಿ.23, 24ರಂದು ದಾವಣಗೆರೆಯಲ್ಲಿ ವೀರಶೈವ-ಲಿಂಗಾಯಿತ 24ನೇ ಮಹಾ ಅಧೀವೇಶನ
ತುಮಕೂರು: ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ(ರಿ) ವತಿಯಿಂದ ದಾವಣಗೆರೆಯ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ಡಿಸೆಂಬರ್ 23 ಮತ್ತು 24 ರಂದು ಅಖಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ 24 ನೇ ಮಹಾ ಅಧಿವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಮೋಹನಕುಮಾರ್ ಪಟೇಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,1904ರಲ್ಲಿ ಹಾನಗಲ್ ಕುಮಾರಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಮೊದಲ ಮಹಾ ಅಧಿವೇಶನ ನಡೆದಿದ್ದು, ಕಳೆದ 10 ವರ್ಷಗಳ ಹಿಂದೆ ಮೈಸೂರಿನ ಶಿವರಾತ್ರಿ ದೇಶಿ ಕೇಂದ್ರ ಮಹಾಸಂಸ್ಥಾನ ಮಠದಲ್ಲಿ 23ನೇ ಅಧಿವೇಶನ ನಡೆದಿತ್ತು. ಪ್ರತಿ ಐದು ವರ್ಷಗಳಿಗೊಮ್ಮೆ ಅಧಿವೇಶ ನಡೆಯುತ್ತಿದ್ದು, ಕರೋನದಿಂದಾಗಿ 24ನೇ ಅಧಿವೇಶವನ್ನು 2023ರ ಡಿ. 23, 24 ರಂದು ನಡೆಸಲು ತೀರ್ಮಾನಿಸಿ, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾದ 24ನೇ ಮಹಾ ಅಧಿವೇಶನಕ್ಕೆ ಸಮುದಾಯದ ಹಿರಿಯರಾದ ದಿವಂಗತ ಎಸ್.ನಿಜಲಿಂಗಪ್ಪ ಮತ್ತು ಜೆ.ಹೆಚ್.ಪಟೇಲ್ ವೇದಿಕೆ ಎಂದು ಹೆಸರುಗಳನ್ನು ಇಡಲಾಗಿದೆ. ಪ್ರಮುಖವಾಗಿ ಕರ್ನಾಟಕದಲ್ಲಿರುವ ವೀರಶೈವ-ಲಿಂಗಾಯಿತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕು. ರಾಜ್ಯ ಸರಕಾರದ ನ್ಯಾಯವಾದಿ ಕಾಂತರಾಜು ವರದಿಯನ್ನು ಸ್ವೀಕರಿಸಬಾರದು ಹಾಗೂ ವೈಜ್ಞಾನಿಕವಾಗಿ ಮತ್ತೊಮ್ಮೆ ಶೈಕ್ಷಣಿಕ, ಅರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಸಬೇಕು ಎಂಬ ನಿರ್ಣಯವನ್ನು ಅಧಿವೇಶನದಲ್ಲಿ ಕೈಗೊಳ್ಳಲಾಗುವುದು ಎಂದು ಮೋಹನ್‍ಕುಮಾರ್ ಪಟೇಲ್ ತಿಳಿಸಿದರು.
ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ವೀರಶೈವ-ಲಿಂಗಾಯಿತರನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸದ ಪರಿಣಾಮ ಕೇಂದ್ರ ಸರಕಾರ ನಡೆಸುವ ಯುಪಿಎಸ್ಸಿ, ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೀಸಲಾತಿ ಇಲ್ಲದಂತಾಗಿದೆ. ಐಎಎಸ್, ಐಪಿಎಸ್ ಅಧಿಕಾರಗಳ ಸಂಖ್ಯೆ ಕ್ಷೀಣಿಸಿದೆ. ಇದರ ವಿರುದ್ದ ಪ್ರಬಲ ಹೋರಾಟ ರೂಪಿಸುವ ನಿಟ್ಟಿನಲ್ಲಿ ಈ ಅಧಿವೇಶದ ಮಹತ್ವದ ಪಾತ್ರ ವಹಿಸುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ವೀರಶೈವ-ಲಿಂಗಾಯಿತ ಸಮಾಜದ ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ಅಧಿವೇಶವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಾಯಿತ ಮಹಾಸಭಾದ ದಕ್ಷಿಣಮೂರ್ತಿ, ಯದುಕುಮಾರ್, ಮಂಜುನಾಥ್, ಶಶಿಧರಯ್ಯ, ಮಂಜುನಾಥ್, ಗೋಪಾಲ್ , ಮಮತ, ಯುವಘಟಕದ ಅಧ್ಯಕ್ಷ ರಕ್ಷಿತ್, ಮಹಿಳಾ ಘಟಕದ ಮಂಜುಳ, ವೀರಶೈವ ಬ್ಯಾಂಕಿನ ರುದ್ರೇಶ್ ಮತ್ತಿತರರ ಮುಖಂಡರು ಪಾಲ್ಗೊಂಡಿದ್ದರು.