ತುಮಕೂರು | ಸೆಲ್ಫಿ ಹುಚ್ಚಾಟಕ್ಕೆ ಆಪತ್ತಿಗೆ ಸಿಲುಕಿದ್ದ ಯುವತಿಯ ರಕ್ಷಣೆ

Update: 2024-10-28 15:29 GMT

ತುಮಕೂರು : ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಕಟ್ಟೆ ಜಲಾಶಯಗಳು ತುಂಬಿ ಹರಿಯುತ್ತಿದೆ. ಇಂತಹ ಸನ್ನಿವೇಶವನ್ನು ಅನಂದಿಸುವ ಕ್ಷಣಕ್ಕಾಗಿ ಯುವಕ-ಯುವತಿಯರು ಪ್ರಾಣಕ್ಕೆ ಆಪತ್ತು ತಂದುಕೊಳ್ಳುತ್ತಿರುವ ಅಂತಹದ್ದೇ ಘಟನೆ ತುಮಕೂರಿನ ಮೈದಾಳ ಕೆರೆಯಲ್ಲಿ ವರದಿಯಾಗಿದೆ.

ತುಮಕೂರಿನ ಮಂದಾರಗಿರಿ ಬೆಟ್ಟದಲ್ಲಿನ ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಆಪತ್ತಿಗೆ ಸಿಲುಕಿದ್ದ ಯುವತಿಯನ್ನು ರಕ್ಷಿಸಲಾಗಿದೆ. ಕೋಡಿಯಲ್ಲಿ ಜಾರಿ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಸೋಮವಾರ ಮುಂದುವರಿಸಲಾಗಿತ್ತು. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿಯನ್ನು ರಕ್ಷಣೆ ಮಾಡಲಾಗಿದೆ.

ಹಂಸ (19) ಆಪತ್ತಿಗೆ ಸಿಲುಕಿದ್ದ ವಿದ್ಯಾರ್ಥಿನಿ. ಗುಬ್ಬಿ ತಾಲೂಕು ಶಿವರಾಂಪುರದ ನಿವಾಸಿ ಸೋಮನಾಥ್ ಅವರ ಪುತ್ರಿ ಹಂಸ ಅವರು ನಗರದ ಎಸ್‌ಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾರೆ. ಅವರು ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದರು. ನೀರಿನಲ್ಲಿ ಜಾರಿ ಹೋಗಿ, ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತಡ ರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಆದರೆ ಆಕೆ ಸಿಲುಕಿರುವ ಜಾಗಕ್ಕೆ ಹೋಗುವುದು ಸವಾಲಿನ ಕೆಲಸವಾಗಿತ್ತು. ಹತ್ತಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ರವಿವಾರ ರಕ್ಷಣಾ ಕಾರ್ಯ ಸ್ಥಗಿತಗೊಳಿಸಿದ್ದ ಅಗ್ನಿಶಾಮಕ ಸಿಬ್ಬಂದಿ, ಸೋಮವಾರ ಘಟನೆ ನಡೆದ ಮಂದಾರಗಿರಿ ಬೆಟ್ಟದ ಬಳಿ ಮೈದಾಳ ಕೆರೆ ಕೋಡಿ ಸ್ಥಳಕ್ಕೆ ಮತ್ತೆ ತೆರಳಿದ್ದು, ಬೆಳಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಪುನಾರಂಭಿಸಿದ್ದರು. ಹಂಸ ಅವರ ತಂದೆ ಸೋಮನಾಥ್, ತಾಯಿ ರಾಧಾ ಮತ್ತು ಸಹೊದರ ಹರ್ಷ ಕೂಡ ಸ್ಥಳಕ್ಕೆ ದೌಡಾಯಿಸಿದ್ದರು.

ಕೋಡಿ ಹರಿಯುವ ಭಾಗದಲ್ಲಿ ಸುಮಾರು ಹದಿನೈದು ಅಡಿ ಆಳದಲ್ಲಿರುವ ಕಲ್ಲಿನ ಬಂಡೆ ನಡುವೆ ಹಂಸ ಸಿಲುಕಿರಬಹುದು ಎಂದು ಶಂಕಿಸಲಾಗಿತ್ತು. ಕೋಡಿ ನೀರು ರಭಸದಿಂದ ಹರಿಯುತ್ತಿರುವ ಕಾರಣ, ಆಕೆಯ ಪತ್ತೆ ಹಾಗೂ ರಕ್ಷಣೆಗೆ ತೊಡಕಾಗಿತ್ತು. ಕೆರೆ ಕೊಡಿಯ ನೀರನ್ನು ಬೇರೆಡೆಗೆ ತಿರುಗಿಸುವ ಮೂಲಕ, ಆಕೆ ಸಿಲುಕಿದ್ದ ಕಲ್ಲಿನ ಪೊಟರೆಯ ಜಾಗಕ್ಕೆ ನೀರು ಹೋಗದಂತೆ ನೋಡಿಕೊಂಡು, ಬಳಿಕ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು.

ಹಂಸ ಮತ್ತು ಅವರ ಸ್ನೇಹಿತೆಯರು ಮಂದಾರಗಿರಿ ಬೆಟ್ಟದ ವೀಕ್ಷಣೆಗೆ ತೆರಳಿದ್ದರು. ಆಗ ಮೈದಾಳ ಕೆರೆ ಕೋಡಿ ಬಳಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಹಂಸ ನೀರಿನಲ್ಲಿ ಕೊಚ್ಚಿ ಹೋಗಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News