ಗುಬ್ಬಿ ಪಟ್ಟಣದ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಒದಗಿಸಿ : ನೈಜ ಹೋರಾಟಗಾರರ ವೇದಿಕೆ ಒತ್ತಾಯ

Update: 2024-10-06 14:08 GMT

ಬೆಂಗಳೂರು : ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಪೊಲೀಸ್ ಠಾಣೆಯ ಹಿಂಭಾಗ ಇರುವ ಮಾರನಕಟ್ಟೆ ಕೆರೆ ಬಡವಾಣೆಯಲ್ಲಿ ಸುಮಾರು 42 ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಮನೆ ನಿರ್ಮಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಒತ್ತಾಯಿಸಿದೆ.

ತುಮಕೂರು ಜಿಲ್ಲಾಧಿಕಾರಿ ಹಾಗೂ ತುಮಕೂರು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವೇದಿಕೆಯ ಸಂಚಾಲಕ ಎಚ್.ಎಂ. ವೆಂಕಟೇಶ್ ಪತ್ರ ಬರೆದಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಪೊಲೀಸ್ ಠಾಣೆ ಹಿಂಭಾಗ ಸುಮಾರು 42ಕ್ಕೂ ಹೆಚ್ಚು ಬುಡಕಟ್ಟು ವರ್ಗಕ್ಕೆ ಸೇರಿದ ಕುಟುಂಬಗಳು ಸುಮಾರು 45 ವರ್ಷಗಳಿಂದ ಮನೆಗಳಿಲ್ಲದೆ ಪ್ಲಾಸ್ಟಿಕ್, ಹರಿದ ಬಟ್ಟೆ ಸೀರೆಗಳ ಗುಡಿಸಲುಗಳಲ್ಲಿ ಸೌಲಭ್ಯ ವಂಚಿತರಾಗಿ ಬದುಕು ಕಟ್ಟಿಕೊಂಡಿದ್ದಾರೆ ಎಂದಿದ್ದಾರೆ.

ಅಲ್ಲಿ ವಾಸಿಸುವ 42 ಕುಟುಂಬಗಳಿಗೆ ಮೂಲಭೂತ ಸೌಕರ್ಯವಿಲ್ಲದೆ, ಹಲವಾರು ವರ್ಷಗಳಿಂದ ಮೂಲ ಸೌಲಭ್ಯ ಒದಗಿಸುವಂತೆ ಜಿಲ್ಲಾಡಳಿತದ ಬಾಗಿಲನ್ನು ತಟ್ಟಿದ್ದಾರೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗದಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಅಲ್ಲಿ ಶುದ್ಧ ಕುಡಿಯುವ ನೀರಿನ ಘಟಕವೂ ಇಲ್ಲ ಎಂದು ತಿಳಿಸಿದ್ದಾರೆ.

ಮಳೆ ಬಂದರೆ ಇಡೀ ಗುಡಿಸಲುಗಳೆಲ್ಲ ಮುಳುಗಿ ಬೀದಿ ಪಾಲಾಗುತ್ತಿದ್ದಾರೆ. ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಬುಡಕಟ್ಟು ಜನರ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ವಿನಿಯೋಗಿಸುತ್ತದೆ. ಆದರೆ ಈ ಬುಡಕಟ್ಟು ಜನರನ್ನು ನೋಡಿದಾಗ ಆ ಹಣವೆಲ್ಲ ಎಲ್ಲಿಗೆ ಹೋಯಿತು? ಎಂಬ ಪ್ರಶ್ನೆ ನಮಗೆಲ್ಲ ಮೂಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹತ್ತು ತಿಂಗಳ ಹಿಂದೆ ಮಳೆ ಬಂದಾಗ ಮಹಿಳೆಯರು ಮಕ್ಕಳು ಪಡುತ್ತಿರುವ ತೊಂದರೆಯನ್ನು ಗಮನಿಸಿದ ಗುಬ್ಬಿ ತಾಲೂಕಿನ ಮಹಿಳಾ ನ್ಯಾಯಾಧೀಶರು ಸ್ಥಳಕ್ಕೆ ಬಂದು ತಾಲೂಕಿನ ಮತ್ತು ಜಿಲ್ಲೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ, ತಾಲೂಕು ಆಡಳಿತವು ಸ್ಪಂದಿಸಿಲ್ಲ. ಹೋರಾಟ ಮಾಡಿದರೂ ಜಿಲ್ಲಾಡಳಿತವು ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಇರುವುದು ಜಿಲ್ಲಾಡಳಿತದ ವೈಫಲ್ಯವನ್ನು ತೋರಿಸುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ 42 ಕುಟುಂಬಗಳಿಗೆ ನಿವೇಶನವನ್ನು ಒದಗಿಸುವ ಸಲುವಾಗಿ 2018 ರಲ್ಲಿ ಜಿಲ್ಲಾಡಳಿತ ಸ್ವಾತೇನಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 49 ರಲ್ಲಿ ಎರಡು ಎಕ್ಕರೆ ಜಾಗದಲ್ಲಿ ಬಡಾವಣೆ ನಿರ್ಮಾಣ ಮಾಡಿ ನಿವೇಶನವನ್ನು ಗುರುತಿಸಲಾಗಿದ್ದು, ಪ್ರದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲ, ಕುಡಿಯುವ ನೀರಿಲ್ಲ, ಶೌಚಾಲಯಗಳು ಇಲ್ಲ. ಇಂತಹ ಪರಿಸ್ಥಿತಿಯಲ್ಲಿರುವ ಈ ಜಾಗದಲ್ಲಿ ಈ ಕುಟುಂಬಗಳು ಹೋಗಿ ವಾಸಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಈ 42 ಕುಟುಂಬಗಳಲ್ಲಿ ಅದರಲ್ಲೂ 15 ಕುಟುಂಬಗಳಿಗೆ ಮಾತ್ರ ಹಕ್ಕುಪತ್ರಗಳನ್ನು ನೀಡಿರುತ್ತಾರೆ. ಉಳಿದವರಿಗೆ ನಿವೇಶನದ ಹಕ್ಕು ಪತ್ರವನ್ನು ನೀಡ,ದೆ ತಾರತಮ್ಯ ಮಾಡಲಾಗಿದೆ. ಹಾಗಾದರೆ ಆ ಉಳಿದ ಕುಟುಂಬಗಳು ಎಲ್ಲಿ ವಾಸ ಮಾಡಬೇಕು ಎಂಬ ಬಗ್ಗೆ ಜಿಲ್ಲಾ ಆಡಳಿತವೇ ಸ್ಪಷ್ಟನೆ ಕೊಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

Delete Edit

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News