ತುಮಕೂರು | ರಾಜ್ಯ ಗೃಹ ಸಚಿವರ ಹೆಸರು ದುರುಪಯೋಗ, ಗೃಹ ಇಲಾಖೆಯ ನಕಲಿ ಲೆಟರ್ ಹೆಡ್ ಬಳಕೆ: ಆರೋಪಿಯ ಬಂಧನ
ತುಮಕೂರು: ರಾಜ್ಯ ಗೃಹಸಚಿವ ಡಾ: ಜಿ. ಪರಮೇಶ್ವರ್ ಅವರ ಹೆಸರು ದುರುಪಯೋಗ ಮತ್ತು ಗೃಹ ಇಲಾಖೆಯ ಹೆಸರಿನ ನಕಲಿ ಲೆಟರ್ ಹೆಡ್ ತಯಾರಿಸಿ ವಂಚಿಸಿದ ಆರೋಪದಲ್ಲಿ ಯುವಕನೋರ್ವನನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಯಲಹಂಕ ಹನುಮಂತಪುರ ನಿವಾಸಿ, ಸಿವಿಲ್ ಕಂಟ್ರಾಕ್ಟರ್ ಮಾರುತಿ ಎಚ್.(30) ಬಂಧಿತ ಆರೋಪಿ. ಈತನನ್ನು ಡಿ.14ರಂದು ಸಂಜೆ ಯಲಹಂಕದಲ್ಲಿ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಘಟನೆ ವಿವರ: ಆರೋಪಿ ಮಾರುತಿ ಎಚ್. ರಾಜ್ಯ ಗೃಹ ಇಲಾಖೆಯ ಹೆಸರಿನ ನಕಲಿ ಲೆಟರ್ ಹೆಡ್ ಸೃಷ್ಟಿಸಿದ್ದಾನೆ. ಆಂಧ್ರದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಸುಲಭವಾಗಿ ಅವಕಾಶ ಸಿಗುವಂತೆ ಮಾಡಿಕೊಡುವುದಾಗಿ ಹೇಳಿ ಅಲ್ಲಿಗೆ ಹೋಗುವ ಭಕ್ತರಿಗೆ ಗೃಹಸಚಿವರ ನಕಲಿ ಲೆಟರ್ ಹೆಡ್ ಗಳನ್ನು ನೀಡಿ 6,000 ರೂ.ನಿಂದ 10,000 ರೂ. ವರೆಗೂ ವಸೂಲಿ ಮಾಡಿದ್ದಾನೆ. ಬಳಿಕ ಆ ಲೆಟರ್ ಹೆಡ್ ಪ್ರತಿಗಳನ್ನು ಅಷ್ಟೇ ಆಂಧ್ರ ಮುಖ್ಯಮಂತ್ರಿಯ ಕಚೇರಿ ಸಿಬ್ಬಂದಿಗೆ ವಾಟ್ಸ್ ಆಪ್ ಮಾಡಿದ್ದಾನೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ರ ಹೆಸರನ್ನು ಬಳಸಿ ಆಂಧ್ರ ಸಿಎಂ ಕಚೇರಿಗೆ ಕರೆ ಮಾಡಿ "ತನ್ನ ಆಪ್ತ ಕುಟುಂಬದ ಸದಸ್ಯರು ತಿರುಪತಿ ತಿರುಮಲ ದೇವಸ್ಥಾನಕ್ಕೆ ಬರುತ್ತಾರೆ. ಅವರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಿ. ಇಲ್ಲವಾದಲ್ಲಿ ನಿಮ್ಮನ್ನು ಅಮಾನತು ಮಾಡಿಸುತ್ತೇನೆ" ಎಂದು ಬೆದರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ರೀತಿ ಗೃಹಸಚಿವರ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಮಾಡಿರುವ ಆರೋಪಿ ವಿರುದ್ಧ ರಾಜ್ಯ ಗೃಹಮಂತ್ರಿಗಳ ವಿಶೇಷ ಅಧಿಕಾರಿ ಡಾ.ಕೆ ನಾಗಣ್ಣ ನೀಡಿರುವ ದೂರಿನಂತೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ. ನಿರ್ದೆಶನದಲ್ಲಿ ಮತ್ತು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿ ಮರಿಯಪ್ಪ, ಅಬ್ದುಲ್ ಖಾದರ್ ಹಾಗೂ ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್. ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಎಸ್ಪಿ ಕಚೇರಿಯ ನಿರೀಕ್ಷಕ ಅವಿನಾಶ್, ಸಿಬ್ಬಂದಿಯಾದ ಸೈಮನ್ ವಿಕ್ಟರ್, ಶಾಂತಕುಮಾರ್, ರಾಜಕುಮಾರ್ ಹಾಗೂ ಗುರುಪ್ರಸಾದ ನೇತೃತ್ವದಲ್ಲಿ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.