ತುಮಕೂರು: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನಕ್ಕೆ ಬಿಜೆಪಿ ಶಾಸಕರಿಂದ ಹಣದ ಆಮಿಷ!

Update: 2024-12-01 12:53 GMT

ಶಾಸಕ ಬಿ. ಸುರೇಶ್ ಗೌಡ‌ (Photo: Facebook)

ತುಮಕೂರು: ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಕಪ್ಪುಬಾವುಟ ಪ್ರದರ್ಶಿಸುವ ವ್ಯಕ್ತಿಗಳಿಗೆ ತಲಾ 1ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಿಸುವ ಮೂಲಕ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ಡಿ.2ರ ಕಾರ್ಯಕ್ರಮದಲ್ಲಿ ದೊಂಬಿ ಎಬ್ಬಿಸಲು ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಡಿಯೋ ಸಾಕ್ಷಿಯೊಂದನ್ನು ಬಿಡುಗಡೆ ಮಾಡಿ, ಸುರೇಶಗೌಡ ಅವರು ತಮ್ಮ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರೆ 1 ಲಕ್ಷ ರೂ, ಸಿ.ಎಂ.ವಿರುದ್ದ ಘೋಷಣೆ ಕೂಗಿದರೆ 50 ಸಾವಿರ ರೂ ಹಣ ನೀಡುವುದಾಗಿ ಘೋಷಣೆ ಮಾಡಿದ್ದು,ರೌಡಿಗಳು, ಗೂಂಡಾಗಳನ್ನು ಬಿಟ್ಟು ಕಾರ್ಯಕ್ರಮವನ್ನು ಹಾಳುಗೆಡವಲು ಸಂಚು ರೂಪಿಸಿದ್ದು,ಈ ಸಂಬಂಧ ಎಸ್ಪಿ ಅವರಿಗೆ ಮನವಿ ನೀಡುತ್ತಿದ್ದು,ಶಾಸಕರ ವಿರುದ್ದ ಎಫ್.ಐ.ಅರ್.ದಾಖಲಿಸಿ, ತನಿಖೆ ನಡೆಸುವಂತೆ ಗೌರಿಶಂಕರ್ ಆಗ್ರಹಿಸಿದರು.

ಗ್ರಾಮಾಂತರ ಶಾಸಕರು ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಲು ಹಣದ ಅಮಿಷಕ್ಕೆ ಒಳಪಡಿಸುತ್ತಿದ್ದಾರೆ. ಆದರೆ ಕ್ಷೇತ್ರದ ಜನರು ಯಾವುದೇ ಆಮಿಷಕ್ಕೆ ಒಳಗಾಗದೆ ಶಾಸಕ ಸುರೇಶಗೌಡರಿಗೆ ಕಪ್ಪು ಬಾವುಟ ಪ್ರದರ್ಶಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಚುನಾವಣೆ ಪೂರ್ವದಲ್ಲಿ ಕ್ಷೇತ್ರವನ್ನು ಮಾದರಿ ಮಾಡುತ್ತೇನೆ ಎಂದು ಒಂದು ವರ್ಷ 08 ತಿಂಗಳು ಕಳೆದರೂ ಒಂದು ರೂ ಅನುದಾನ ತಂದಿಲ್ಲ. ಕೇವಲ ಮುಖ್ಯಮಂತ್ರಿಗಳ ವಿರುದ್ದ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಮನವಿ ನೀಡುವುದರಿಂದ ಅನುದಾನ ಬರಲ್ಲ. ಫೈಲ್‍ಗಳ ಹಿಂದೆ ಓಡಾಡಬೇಕು. ನಾನು ಶಾಸಕನಾಗಿದ್ದಾಗ ಬಿಜೆಪಿ ಸರಕಾರವಿದ್ದರೂ ಹತ್ತಾರು ಕೋಟಿ ರೂ ಅನುದಾನವನ್ನು ಕ್ಷೇತ್ರದ ಅಭಿವೃದ್ದಿಗೆ ತಂದಿದ್ದೆ. ಹಾಲಿ ಶಾಸಕರಿಗೆ ಏಕೆ ಸಾಧ್ಯವಾಗುತ್ತಿಲ್ಲ. ಇದು ಅವರ ಅಸಮರ್ಥತೆಯಲ್ಲವೇ ? ಎಂದು ಗೌರಿಶಂಕರ್ ಪ್ರಶ್ನಿಸಿದರು.

ಗ್ರಾಮಾಂತರ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವಾದರೆ ಖುಷಿ ಪಡಬೇಕು, ಪ್ರಚಾರದ ಗಿಳಿಗಾಗಿ ಆರೋಪ ಮಾಡುವುದು ಸರಿಯಲ್ಲ.ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟಿಸಿದರೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆಯಬಹುದು ಎಂಬ ಹಂಬುತನದ ಜೊತೆಗೆ,ಕ್ರಿಕೆಟ್ ನಿರ್ಮಾಣ ಮಾಡುತ್ತಿರುವುದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಇವರಿಂದ ಕಮಿಷನ್ ಸಿಗುವುದಿಲ್ಲ ಎಂಬ ಹತಾಶೆಗೆ ಒಳಗಾಗಿ, ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ವಿರೋಧಿಸುತ್ತಿದ್ದಾರೆ. ಕೆಎಸ್‍ಸಿಎ ಅಕಾಡೆಮಿಯಲ್ಲಿ ತರಬೇತಿ ಪಡೆದು ನಮ್ಮ ಭಾಗದ ಮಕ್ಕಳು ಅಂತರರಾಷ್ಟ್ರೀಯ ಆಟಗಾರರಾಗುವುದು ಶಾಸಕರಿಗೆ ಇಷ್ಟವಿಲ್ಲವೆಂದು ಕಾಣುತ್ತದೆ ಎಂದು ಆರೊಪಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ವಿರೋಧ ಪಕ್ಷದ ಮುಖಂಡರು ಪದೇ ಪದೇ ಕಾಂಗ್ರೆಸ್ ಸರಕಾರದಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಸರಕಾರದ ವಿರುದ್ದ ಜನರಲ್ಲಿ ತಪ್ಪು ಭಾವನೆ ಬರುವಂತೆ ಮಾಡುತ್ತಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್ ರವರನ್ನು ಮಂತ್ರಿ ಮಾಡುತ್ತೇವೆ ಎಂದು ಕರೆದು ಕೊಂಡು ಮಂಗ ಮಾಡಿದ್ದಾರೆ ಎಂಬ ಬಿಜೆಪಿ ಶಾಸಕ ಬಿ.ಸುರೇಶಗೌಡ ಆರೋಪ ಸುಳ್ಳು. ಇಂತಹ ಹೇಳಿಕೆಗಳನ್ನು ಶಾಸಕರು ಕೂಡಲೇ ನಿಲ್ಲಿಸಬೇಕು ಎಂದರು.

ಗ್ಯಾರೆಂಟಿಗಳಿಂದ ಸರಕಾರಕ್ಕೆ ನಷ್ಟವಾಗಿಲ್ಲ, ವಿರೋಧ ಪಕ್ಷಗಳು ಹೇಳುವಂತೆ ಅಭಿವೃದ್ಧಿ ಕಾಮಾಗಾರಿಗಳು ನಡೆಯುತ್ತಿಲ್ಲ ಎಂದು ಹೇಳುತ್ತಿರುವುದಕ್ಕೆ ಪ್ರತಿಯಾಗಿ ಈ ಅಭಿವೃದ್ಧಿ ಕಾಮಗಾರಿಗಳನ್ನು ವಿರೋಧ ಪಕ್ಷಗಳಿಗೆ ತೊರಿಸಲೆಂದೆ ತುಮಕೂರಿಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳಿಗೆ ಹೇಳಿಕೆಗಳಿಗೆ ಟಾಂಗ್ ನೀಡಿದ ಅವರು,ಕಾರ್ಯಕ್ರಮಕ್ಕೆ ಬರುವ ಫಲಾನುಭವಿಗಳನ್ನು ಕರೆತರಲು ಗ್ರಾಮಪಂಚಾಯಿತಿಯವರು ಬಸ್ ವ್ಯವಸ್ಥೆ ಮಾಡಿದ್ದಾರೆ ಹೊರತು ಕಾಂಗ್ರೆಸ್ ಕಾರ್ಯಕರ್ತರಿಗೆ ಅಲ್ಲ.ಮುಖ್ಯಮಂತ್ರಿಗಳ ಕಾರ್ಯಕ್ರಮವು ಕಾಂಗ್ರೆಸ್ ಕಾರ್ಯಕ್ರಮವಲ್ಲ, ಸರಕಾರಿ ಕಾರ್ಯಕ್ರಮ ಎಂದು ಚಂದ್ರಶೇಖರಗೌಡ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮುಖಂಡ ಮುರುಳೀಧರ್ ಹಾಲಪ್ಪ ಮಾತನಾಡಿ,ಅಮೃತ ಯೋಜನೆಗೆ ಕೇಂದ್ರದ ಬಿಜೆಪಿ ಸರಕಾರ ಹಣವನ್ನೆ ಬಿಡುಗಡೆ ಮಾಡಿಲ್ಲ,ಸುರೇಶ್‍ಗೌಡ ಸುಮ್ಮನೇ ಅಪ ಪ್ರಚಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಬಂದಾಗ ಯಾವುದೇ ಅಹಿತಕರ ಘಟನೆ ನಡೆದರೆ ಸುರೇಶ್‍ಗೌಡ ಮತ್ತು ವಿರೋಧ ಪಕ್ಷದ ಮುಖಂಡರೆ ನೇರಹೊಣೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್‍ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರಕಾಶ್,ಬುಗಡನಹಳ್ಳಿ ನಾರಾಯಣಪ್ಪ,ಮುಖಂಡರಾದ ಷಣ್ಮುಖಪ್ಪ, ಶಿವಣ್ಣ ಮತ್ತಿತರರು ಹಾಜರಿದ್ದರು.

ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ:

ಡಾ.ಪರಮೇಶ್ವರ್ ವಿಪಕ್ಷ ಶಾಸಕರಿಗೂ ಅನುದಾನ ನೀಡುವುದಾಗಿ ಭರವಸೆ ನೀಡಿದ್ದು, ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ನಡೆಯಬೇಕಿದ್ದ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ಕಪ್ಪುಪಟ್ಟಿ ಪ್ರದರ್ಶನವೂ ಹಿಂಪಡೆಯುವುದಾಗಿ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News