ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ : ಸಿಎಂ ಸಿದ್ದರಾಮಯ್ಯ
ತುಮಕೂರು : ನಮ್ಮ ಐದಕ್ಕೆ ಐದೂ ಗ್ಯಾರಂಟಿಗಳು ಮತ್ತು ನಮ್ಮ ಸರಕಾರದ ಅಭಿವೃದ್ಧಿ ಯೋಜನೆಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸೇರಿವೆ. ನಾವು ಎಲ್ಲರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರಿಂದಲೇ ರಾಜ್ಯದ ಆರ್ಥಿಕತೆ ವೇಗ ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಸರಕಾರದ ನಾನಾ ಯೋಜನೆಗಳ 750 ಕೋಟಿ ರೂ. ಮೊತ್ತದ 23 ಸಾವಿರಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ, ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಇಡೀ ದೇಶದಲ್ಲಿ ರಾಜ್ಯದ ಜಿಡಿಪಿ ನಂಬರ್ ಒನ್ ಆಗಿದೆ. ದೇಶದ ಜಿಡಿಪಿ ಇನ್ನೂ 8 ಇದೆ. ಆದರೆ ರಾಜ್ಯದ ಜಿಡಿಪಿ 10ಕ್ಕೆ ತಲುಪಿದೆ. ವಿದೇಶಿ ಬಂಡವಾಳ ಆಕರ್ಷಣೆ ಮತ್ತು ಕೇಂದ್ರಕ್ಕೆ ತೆರಿಗೆ ಪಾವತಿಸುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದು ಸಾಧ್ಯವಾಗಿದ್ದು ರಾಜ್ಯದ ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದವರ ಒಟ್ಟಾರೆ ಕೊಡುಗೆಯಿಂದ ಎಂದು ವಿವರಿಸಿದರು.
ತುಮಕೂರು ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳು ಇಂದು ನೇರವಾಗಿ ತಲುಪಿವೆ. ಪ್ರತೀ ಜಿಲ್ಲೆಯಲ್ಲೂ ಲಕ್ಷ ಲಕ್ಷ ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳು ತಲುಪುತ್ತಲೇ ಇವೆ ಎಂದರು.
ರಾಜ್ಯದ ಪ್ರತಿಯೊಬ್ಬರಿಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯಕ್ರಮಗಳನ್ನು ನಾವು ಕೊಡುತ್ತಲೇ ಹೋಗುತ್ತೇವೆ. ಜೊತೆಗೆ ಹಿಂದುಳಿದವರ, ದುರ್ಬಲರ ಏಳಿಗೆಗೆ ವಿಶೇಷ ಯೋಜನೆಗಳನ್ನೂ ರೂಪಿಸುತ್ತೇವೆ. ಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಜಾರಿ ಮಾಡಿದ್ದು ನಮ್ಮ ಸರಕಾರ ಮಾತ್ರ. ಆದ್ದರಿಂದ ನಮ್ಮ ಸರಕಾರ ಮಹಿಳೆಯರ ಪರವಾದ ಸರಕಾರ. ನಮ್ಮ ಸರಕಾರ ಎಲ್ಲಾ ಜಾತಿಯ ಬಡವರ, ಹಿಂದುಳಿದವರ, ದಲಿತರ ಪರವಾಗಿರುವ ಸರಕಾರ ಎಂದರು.
ಹಳ್ಳಿಗಳ, ತಾಲ್ಲೂಕುಗಳ, ಜಿಲ್ಲೆಗಳ ಅಭಿವೃದ್ಧಿಯಿಂದ ಮಾತ್ರ ರಾಜ್ಯದ, ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಜಿಡಿಪಿ ಪ್ರಗತಿ ಕಾಣಲು ಸಾಧ್ಯ. ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರು ಆರ್ಥಿಕವಾಗಿ ಪ್ರಗತಿ ಹೊಂದಿದರೆ ಮಾತ್ರ ದೇಶದ ಜಿಡಿಪಿ ಬೆಳವಣಿಗೆಯಾಗುತ್ತದೆ ಎಂದರು.
ಹೀಗಾಗಿ ನಮ್ಮ ಸರಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವಾಗ ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರನ್ನೂ ಒಳಗೊಳ್ಳುವಂತೆ ರೂಪಿಸುತ್ತೇವೆ. ನಮ್ಮ ಐದಕ್ಕೆ ಐದೂ ಗ್ಯಾರಂಟಿಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸೇರಿದ್ದಾಗಿದೆ. ಈ ರೀತಿ ಸಕಲರ ಅಭಿವೃದ್ಧಿ ರೂಪಿಸಿದ್ದರಿಂದಲೇ ರಾಜ್ಯದ ಆರ್ಥಿಕತೆ ವೇಗ ಪಡೆದುಕೊಂಡಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎನ್.ರಾಜಣ್ಣ, ಬೈರತಿ ಸುರೇಶ್, ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಸೇರಿ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.