ತುಮಕೂರು | ಇಂಜಿನಿಯರಿಂಗ್ ಉದ್ಯೋಗಿ ಕೆರೆಗೆ ಹಾರಿ ಆತ್ಮಹತ್ಯೆ : ಮುಂದುವರೆದ ಶೋಧಕಾರ್ಯ

ತುಮಕೂರು : ಇಂಜಿನಿಯರಿಂಗ್ ಮಹಿಳಾ ಉದ್ಯೋಗಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಸಮೀಪವಿರುವ ದೊಡ್ಡಕೆರೆಯ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯನ್ನು ಕುಣಿಗಲ್ ತಾಲೂಕಿನ ಸೊಬಗಾನಹಳ್ಳಿಯ 25 ವರ್ಷದ ಬಿ.ಟಿ.ಸುಮಾ ಎಂದು ಹೇಳಲಾಗಿದೆ.
ಸುಮಾ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಮಡಿವಾಳದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಗುರುವಾರ ಬೆಳಗ್ಗೆ ಸೊಬಗಾನಹಳ್ಳಿಯಿಂದ ಕೆಲಸಕ್ಕೆಂದು ಹೊರಟ ಸುಮಾ, ಬೆಳಗ್ಗೆ 7 ಗಂಟೆಗೆ ಕುಣಿಗಲ್ ನಿಂದ ಬೆಂಗಳೂರಿಗೆ ಸಾರಿಗೆ ಬಸ್ ನಲ್ಲಿ ತೆರಳಿದ್ದರು. ಆದರೆ ಬೆಳಗ್ಗೆ 11 ಗಂಟೆಗೆ ತುರುವೇಕೆರೆ ಬಸ್ ನಲ್ಲಿ ಕುಣಿಗಲ್ ಗೆ ವಾಪಸ್ ಬಂದಿದ್ದಾರೆ ಎಂದು ಹೇಳಲಾಗಿದೆ.
ಸುಮಾ ಕುಣಿಗಲ್ ದೊಡ್ಡಕೆರೆಯ ಏರಿಯ ಸತ್ಯಗಣಪತಿ ದೇವಾಲಯದ ಮುಂಭಾಗದ ಜಾಕ್ ವೆಲ್ ಬಳಿ ಅವರ ಬ್ಯಾಗ್ ಇಟ್ಟು, ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ನಲ್ಲಿ ಯುವತಿಯ ಪತ್ತೆಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಶಾಸಕ ಡಾ.ಎಚ್.ಡಿ.ರಂಗನಾಥ್ ಸಾಥ್ ನೀಡಿದ್ದಾರೆ.