ತುಮಕೂರು | ಸೈಬರ್ ಕ್ರೈಮ್, ಡ್ರಗ್ಸ್ ತಡೆಗೆ ಪೊಲೀಸರಿಂದ ಮ್ಯಾರಾಥಾನ್

ತುಮಕೂರು : ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಸೇವನೆಯ ವಿರುದ್ದ ಹಾಗೂ ಸೈಬರ್ ಅಪರಾಧಗಳ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಆದೇಶದ ಮೇರೆಗೆ ನಗರದಲ್ಲಿ ಪೊಲೀಸ್ ಓಟ ಹಮ್ಮಿಕೊಳ್ಳಲಾಗಿತ್ತು.
ನಗರದ ಜಿಲ್ಲಾ ಶಸ್ತ್ರಾಸ್ತ ಮೀಸಲು ಪಡೆಯ ಪೆರೇಡ್ ಗ್ರೌಂಡ್‍ನಿಂದ ಆರಂಭಗೊಂಡ 5 ಸಾವಿರ ಮೀಟರ್ ಮತ್ತು 10 ಸಾವಿರ ಮೀಟರ್ ಗಳ ಪೊಲೀಸ್ ಓಟಕ್ಕೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಅಲ್ಲದೆ ನಗರದ ಪೊಲೀಸ್ ಪೇರೆಡ್ ಅಂಗಳದಿಂದ ತುಮಕೂರು ವಿಶ್ವವಿದ್ಯಾಲಯ, ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ಸರ್ಕಲ್, ಕೋತಿ ತೋಪು, ಕರಿಬಸವೇಶ್ವರ ವೃತ್ತದ ಮೂಲಕ ಗಾಜಿನಮನೆಯವರೆಗೆ ಪೊಲೀಸರು ಹಾಗೂ ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ಇಲಾಖೆ ವತಿಯಿಂದ ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಭಾನುವಾರ ಮ್ಯಾರಾಥಾನ್ ಮಾಡುವುದು ವಾಡಿಕೆ. ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ 5 ಮತ್ತು 10 ಸಾವಿರ ಮೀಟರ್ ಓಟ ಯಶಸ್ವಿಯಾಗಿ ನಡೆದಿದೆ. ಈ ವರ್ಷ ಡ್ರಗ್ಸ್ ಮತ್ತು ಸೈಬರ್ ಕ್ರೈಮ್ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಓಟ ನಡೆಸಿದ್ದಾರೆ.
500ಕ್ಕೂ ಹೆಚ್ಚು ಜನರ ಈ ಓಟದಲ್ಲಿ ಪಾಲ್ಗೊಂಡಿದ್ದಾರೆ. ಈ ವರ್ಷದ ಘೋಷವಾಕ್ಯ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂಬುದಾಗಿದೆ. ಪೊಲೀಸರು ಹಗಲಿರುಳು ಕೆಲಸ ಮಾಡುವ ಮೂಲಕ ಜನರು ನೆಮ್ಮದಿಯಾಗಿ ಇರಲು ಸಹಕಾರ ನೀಡುತ್ತಿದ್ದಾರೆ. ಕ್ರೈಮ್ ರೇಟ್ ಮತ್ತು ಸೈಬರ್ ಕ್ರೈಮ ಕಡಿಮೆಯಾಗಲು ಪೊಲೀಸರ ನಿರಂತರ ಪ್ರಯತ್ನವೇ ಕಾರಣ. ಅವರಿಗೂ ಕೂಡ ಜಿಲ್ಲಾಡಳಿತದಿಂದ ಧನ್ಯವಾದಗಳನ್ನು ಹೇಳುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವೆಂಕಟ್ ಮಾತನಾಡಿ, ಜನಸ್ನೇಹಿ ಪೊಲೀಸ್ ಆಗುವ ಪ್ರಯತ್ನದಲ್ಲಿ ಈ ಮ್ಯಾರಥಾನ್ ಕೂಡ ಒಂದಾಗಿದೆ. ಕ್ರೀಡೆ ಜನರ ನಡುವೆ ಬೆಸುಗೆಯಾಗಿದೆ. ಸಾವಿರಾರು ಜನರು ಒಂದೆಡೆ ಸೇರಲು ಕಾರಣ ವಾಗಿದೆ. ಪ್ರಮುಖವಾಗಿ ಡ್ರಗ್ಸ್ ವಿರುದ್ದ ಜನರಲ್ಲಿ ಜಾಗೃತಿ ಮತ್ತು ಸೈಬರ್ ಕ್ರೈಮ್ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದು ಇದರ ಹಿಂದಿನ ಉದ್ದೇಶವಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮ್ಯಾರಾಥಾನ್ ಯಶಸ್ವಿಯಾಗಿದೆ. ಇದರಲ್ಲಿ ಭಾಗಿಯಾದ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲರಿಗೂ ಕೃತಜ್ಞತೆಗೆ ಸಲ್ಲಿಸುವುದಾಗಿ ತಿಳಿಸಿದರು.
ಪೊಲೀಸ್ ಓಟದಲ್ಲಿ ಹಿರಿಯ ಅಧಿಕಾರಿಗಳಾದ ಪರಿಯಪ್ಪ, ಖಾದರ್ ಅಬ್ದುಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
