ತುಮಕೂರು| ಜೆಡಿಎಸ್ ಮುಖಂಡನ ಕಾರು ಅಪಘಾತ; ಮಹಿಳೆ ಮೃತ್ಯು

ಸಾಂದರ್ಭಿಕ ಚಿತ್ರ
ತುಮಕೂರು: ತುಮಕೂರು ಜಿಲ್ಲೆಯ ಜೆಡಿಎಸ್ ಮುಖಂಡರೊಬ್ಬರ ಕಾರು ಅಪಘಾತಕ್ಕೀಡಾಗಿದ್ದು, ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗೇಟ್ ಸಮೀಪ ನಡೆದಿದೆ
ಪಾವಗಡ ತಾಲೂಕಿನ ಜೆಡಿಎಸ್ ಮುಖಂಡರಾದ ಶಿವಪ್ಪ ನಾಯಕ ಅವರು ತಮ್ಮ ಕಾರಿನಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದು, ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಕಾರು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಶಿವಪ್ಪ ನಾಯಕ ಮತ್ತು ಅವರ ಪತ್ನಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾವಗಡ ಜೆಡಿಎಸ್ ಮುಖಂಡ ಶಿವಪ್ಪ ಕೆಲವು ದಿನಗಳ ಹಿಂದಷ್ಟೇ ಹೊಸ ಕಾರು ಖರೀದಿಸಿದ್ದರು. ಮದುವೆ ಮುಗಿಸಿಕೊಂಡು ವಾಪಸ್ ಬರುವಾಗ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ನೀರಿನ ಸಂಪ್‌ಗೆ ಢಿಕ್ಕಿ ಹೊಡೆದಿದೆ. ಸಿಮೆಂಟ್‌ನಿಂದ ನಿರ್ಮಿಸಲಾದ ನೀರಿನ ತೊಟ್ಟಿಗೆ ಢಿಕ್ಕಿ ಹೊಡೆದ ವೇಳೆ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆ ಕಾರಿನ ಗಾಜಿನಿಂದ ಸೀದಾ ನೀರಿನ ತೊಟ್ಟಿಯೊಳಗೆ ಬಿದ್ದಿದ್ದಾರೆ. ನೀರಿನ ತೊಟ್ಟಿಯಿಂದ ಹೊರ ಬರಲಾಗದೆ ಸಾವನ್ನಪಿದ್ದಾರೆ ಸ್ಥಳೀಯರ ಸಹಾಯದೊಂದಿಗೆ ಗಾಯಾಳುಗಳಾದ ಶಿವಪ್ಪ ನಾಯಕ ಮತ್ತು ಅವರ ಪತ್ನಿಯನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಘಟನೆ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ