ತುಮಕೂರು | 4 ವರ್ಷದ ಮಗುವನ್ನು ಹತ್ಯೆಗೈದು ಬ್ಯಾಡನೂರು ಗ್ರಾಪಂ ಅಧ್ಯಕ್ಷೆ ಆತ್ಮಹತ್ಯೆ

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಬ್ಯಾಡನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರುತಿ ತನ್ನ 4 ವರ್ಷದ ಪುತ್ರಿಯನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಎಂಟನೇ ಮೈಲಿಯ ಬಾಗಲಕುಂಟೆ ಎಂಬಲ್ಲಿ ರವಿವಾರ ಸಂಜೆ ನಡೆದಿದೆ.
ಪತಿಯ ಅನೈತಿಕ ಸಂಬಂಧದಿಂದ ಮನ ನೊಂದು ಶ್ರುತಿ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದ್ದು, ಈ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ಶಿರಾ ತಾಲೂಕಿನ ಗುಳಿಗೇನಹಳ್ಳಿಯವರಾಗಿದ್ದ ಶ್ರುತಿ ನಾಲ್ಕು ವರ್ಷಗಳ ಹಿಂದೆ ಬ್ಯಾಡನೂರು ಗ್ರಾಪಂ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 8 ತಿಂಗಳಿಂದ ಗ್ರಾಪಂ ಅಧ್ಯಕ್ಷೆಯಾಗಿದ್ದಾರೆ. ಪ್ರಸಕ್ತ ಪತಿ ಗೋಪಾಲ ಕೃಷ್ಣ ಗುಂಡಾರಲಹಳ್ಳಿ ಗ್ರಾಮ ನಿವಾಸಿ ಗೋಪಾಲಕೃಷ್ಣ ಅಲಿಯಾಸ್ ಜಿ. ಕೃಷ್ಣ ಮತ್ತು ಮಕ್ಕಳ ಜತೆ ಬೆಂಗಳೂರಿನ ನಾಗಸಂದ್ರದ ಎಂ.ಎಸ್. ರಾಮಯ್ಯ ಲೇಔಟ್ನಲ್ಲಿ ವಾಸವಿದ್ದ ಅವರು ವಾರಕ್ಕೊಮ್ಮೆ ಬ್ಯಾಡನೂರು ಗ್ರಾಮಕ್ಕೆ ಹೋಗಿ ಬರುತ್ತಿದ್ದರು.
ಈ ಮಧ್ಯೆ ಪತಿಯ ಅನೈತಿಕ ಸಂಬಂಧದ ವಿಚಾರವಾಗಿ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತೆನ್ನಲಾಗಿದೆ. ಇದೇ ವಿಚಾರವಾಗಿ ನೊಂದಿದ್ದ ಶ್ರುತಿ ರವಿವಾರ ಸಂಜೆ ಪತಿ ಮತ್ತು ಸಹೋದರನಿಗೆ ವಾಟ್ಸ್ ಆ್ಯಪ್ ಮೂಲಕ ಡೆತ್ ನೋಟ್ ಕಳುಹಿಸಿ ನಾಲ್ಕು ವರ್ಷದ ಪುತ್ರಿ ರೋಹಿಣಿಯನ್ನು ಹತ್ಯೆಗೈದು ತಾನು ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಶ್ರುತಿ ಅವರ ತಂದೆ ಬೆಂಗಳೂರಿನ ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ತನ್ನ ಅಳಿಯನ ಅಕ್ರಮ ಸಂಬಂಧವೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ದೂರು ದಾಖಲಿಸಿದ್ದಾರೆ. ಅದರಂತೆ ಶ್ರುತಿಯ ಪತಿ ಗೋಪಾಲಕೃಷ್ಣ ಅಲಿಯಾಸ್ ಜಿ. ಕೃಷ್ಣ ಮತ್ತು ಆತನ ಸ್ನೇಹಿತೆಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.