ಪಾವಗಡ | ಚಿಕ್ಕಿ ತಿಂದು 40ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು
ಪಾವಗಡ : ತಾಲ್ಲೂಕಿನ ನಿಡಗಲ್ ಹೋಬಳಿಯ ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಣನಕುರಿಕೆಯಲ್ಲಿ ಶುಕ್ರವಾರ ಬಿಸಿಯೂಟದೊಂದಿಗೆ ಹುಳ ಬಿದ್ದಿದ್ದ ಚಿಕ್ಕಿ ತಿಂದು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಟ್ಟೆನೊವಿನಿಂದ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡ ಘಟನೆ ನಡೆದಿದೆ.
ತಕ್ಷಣಕ್ಕೆ ಅಂಬುಲೆನ್ಸ್ ಸೇವೆ ಸಿಗದ ಕಾರಣ ಶಾಲಾ ಮಕ್ಕಳನ್ನು ಗ್ರಾ.ಪಂ. ಸದಸ್ಯರೊಬ್ಬರ ಕಾರಿನಲ್ಲಿ ಪಟ್ಟಣದ ತಾಯಿ ಮತ್ತು ಮಕ್ಕಳ ಸಾರ್ವಜನಿಕ ಸರಕಾರಿ ಆಸ್ವತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಚಿಕ್ಕಿಯಲ್ಲಿ ಹುಳ : ವಿದ್ಯಾರ್ಥಿಗಳಿಗೆ ಬಿಸಿಯೂಟದೊಂದಿಗೆ ನೀಡಿದ್ದ ಚಿಕ್ಕಿಯು ದುರ್ವಾಸನೆಯಿಂದ ಕೂಡಿದ್ದು ಹಾಗೂ ಹುಳು ಸಿಕ್ಕಿದೆ. ಇದರಿಂದಲೇ ಮಕ್ಕಳಿಗೆ ಬಿಸಿಯೂಟ ಸೇವನೆ ನಂತರ ಹೊಟ್ಟೆನೋವು ಕಾಣಿಸಿಕೊಂಡು ವಾಂತಿಯಾಗಿದೆ ಎಂದು ವಿದ್ಯಾರ್ಥಿನಿ ಹರ್ಷಿತಾ ಹೇಳಿದ್ದಾರೆ.
ವಿಷಯ ತಿಳಿಯುತಿದ್ದಂತೆ ತಾಲ್ಲೂಕು ಅಧಿಕಾರಿಗಳಾದ ತಹಶೀಲ್ದಾರ್ ವರದರಾಜು, ಇ.ಒ ಜಾನಕೀರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಇಮದ್ರಾಣಮ್ಮ, ಅಕ್ಷರ ದಾಸೋಹ ವ್ಯವಸ್ಥಾಪಕ ಶಂಕರಪ್ಪ ಇನ್ನಿತರೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ನಂತರ ತಹಶೀಲ್ದಾರ್ ವರದರಾಜು ಮಾತನಾಡಿ, "ಬಿಸಿ ಊಟ ಸೇವನೆ ನಂತರ ಕೆಲ ಮಕ್ಕಳಿಗೆ ವಾಂತಿ-ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಅಸ್ವಸ್ಥಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ" ಎಂದರು.