ತುಮಕೂರು| ಜಿಲೆಟಿನ್ ಕಡ್ಡಿ ಸ್ಪೋಟಗೊಂಡು ವಿದ್ಯಾರ್ಥಿ ಕೈಗೆ ಗಂಭೀರ ಗಾಯ
ತುಮಕೂರು: ಜೀವಂತ ಜಿಲೆಟಿನ್ ಕಡ್ಡಿ ಸ್ಪೋಟಿಸಿ ವಿದ್ಯಾರ್ಥಿಯೊಬ್ಬನ ಕೈಬೆರಳುಗಳ ತುಂಡಾಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಸಂಭವಿಸಿದೆ.
ಗಾಯಗೊಂಡಿರುವ ವಿದ್ಯಾರ್ಥಿಯನ್ನು 15 ವರ್ಷದ ಮೊನೀಶ್ ಗೌಡ ಎಂದು ಗುರುತಿಸಲಾಗಿದೆ.
ಸರಕಾರಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆಂದು ಕಲ್ಲುಗಳನ್ನು ತರಲಾಗಿತ್ತು. ಆ ಕಲ್ಲುಗಳ ನಡುವೆ ಜೀವಂತ ಜಿಲೆಟಿನ್ ಇತ್ತು. ಅದು ಜಿಲೆಟಿನ್ ಎಂದು ಅರಿಯದ ಮೊನೀಶ್ ಗೌಡ ಕೈಗೆ ತೆಗೆದುಕೊಂಡಿದ್ದಾರೆ. ಆಗ ಜಿಲೆಟಿನ್ ಕಡ್ಡಿ ಸ್ಪೋಟಗೊಂಡು ಕೈಬೆರಳುಗಳು ತುಂಡಾಗಿ ಹೋಗಿವೆ ಎಂದು ಹೇಳಲಾಗಿದೆ.
ಇಡಗೂರು ಸರಕಾರಿ ಪ್ರೌಢಶಾಲೆಯಲ್ಲಿ ದಸರಾ ರಜೆ ಇದ್ದರೂ ಎಸ್ಎಸ್ಎಲ್.ಸಿ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ತರಗತಿಗಾಗಿ ಆಗಮಿಸುತ್ತಿದ್ದ ವೇಳೆ ಜಲ್ಲಿ ಕಲ್ಲುಗಳ ಮಧ್ಯ ಕಂಡ ವೈರ್ ಸಹಿತ ಇದ್ದ ಜಿಲೆಟಿನ್ ಕಡ್ಡಿ ಕಂಡು ಕುತೂಹಲದಿಂದ ತೆಗೆದುಕೊಂಡು ಶಾಲಾ ಮೈದಾನದಲ್ಲಿ ಸ್ಪಲ್ಪ ದೂರ ಹೋದಾಗ ಬಿಸಿಯಾಗಿದ್ದು ಅನುಭವಕ್ಕೆ ಬಂದು ಜಿಲೆಟಿನ್ ಕಡ್ಡಿಯನ್ನು ಎಸೆಯಲು ಮುಂದಾದಾಗ ಸ್ಪೋಟಗೊಂಡು ಬಲಗೈ ಬೆರಳುಗಳು ತುಂಡಾಗಿವೆ ಎಂದು ತಿಳಿದುಬಂದಿದೆ.
ಶಾಲಾ ಕಾಂಪೌಂಡ್ ನಿರ್ಮಾಣಕ್ಕೆಂದು ನರೇಗಾ ಯೋಜನೆಯಡಿ ಕೆಲಸ ಆರಂಭಿಸಿ ಹಳ್ಳ ಮುಚ್ಚಲು ಕಲ್ಲುಗಳನ್ನು ತರಲಾಗಿತ್ತು. ಈ ಕಲ್ಲುಗಳ ನಡುವೆ ಜೀವಂತ ಜಿಲೆಟಿನ್ ಕಡ್ಡಿಗಳು ಇರುವುದು ಯಾರೂ ನೋಡಿರಲಿಲ್ಲ. ಕುತೂಹಲದಿಂದ 10ನೇ ತರಗತಿ ವಿದ್ಯಾರ್ಥಿ ಮೊನೀಶ್ ಗೌಡ ಜಿಲೆಟಿನ್ ಕಡ್ಡಿಯನ್ನು ಹಿಡಿದುಕೊಂಡಾಗ ಈ ಘಟನೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲೆಟಿನ್ ಸ್ಪೋಟಗೊಂಡ ಶಬ್ದ ಸುತ್ತಮುತ್ತಲ ಹಳ್ಳಿಗೂ ಕೇಳಿಸಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಸಿಪಿಐ ಗೋಪಿನಾಥ್ ಆಗಮಿಸಿ ಪರಿಶೀಲಿಸಿದ್ದಾರೆ. ಕಲ್ಲುಗಳ ನಡುವೆ ಜಿಲೆಟಿನ್ ಕಡ್ಡಿ ಇರುವುದನ್ನು ಖಚಿತಪಡಿಸಿಕೊಂಡು ಕಲ್ಲುರಾಶಿ ಸುತ್ತಲೂ ನೂರು ಮೀಟರ್ ನಿರ್ಬಂಧಿಸಲಾಗಿದೆ. ಈ ಕಾಮಗಾರಿಯನ್ನು ಪಂಚಾಯ್ತಿ ಸದಸ್ಯ ಸುಶಾಂತ್ ಗೌಡ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಸ್ಥಳಕ್ಕೆ ಭೂ ಮತ್ತು ಗಣಿಗಾರಿಕೆ ಉಪನಿರ್ದೇಶಕ ಲೋಕೇಶ್ ಕುಮಾರ್, ಭೂ ವಿಜ್ಞಾನಿ ಸಂತೋಷ್ ಕುಮಾರ್, ಗುಬ್ಬಿ ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್, ಕಂದಾಯ ನಿರೀಕ್ಷಕಿ ಪ್ರಮೀಳಾ, ಗ್ರಾಮ ಲೆಕ್ಕಿಗ ಅಭಿವೇಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.