ಸಿಪಿಐ(ಎಂ)ರಾಜ್ಯ ಸಮ್ಮೇಳನ : ಕೋಮು ಸೌಹಾರ್ದತೆ, ಪ್ರಜಾಪ್ರಭುತ್ವ ರಕ್ಷಣೆಗೆ ನಿರ್ಣಯ

Update: 2024-12-31 16:07 GMT

ತುಮಕೂರು : ಸಮಗ್ರ, ಸಂವೃದ್ದ, ಸೌಹಾರ್ಧ ಕರ್ನಾಟಕ ಘೋಷ ವಾಕ್ಯದೊಂದಿಗೆ ತುಮಕೂರಿನಲ್ಲಿ ನಡೆದ ಸಿಪಿಐ(ಎಂ)ನ 24ನೇ ರಾಜ್ಯ ಸಮ್ಮೇಳನದಲ್ಲಿ ಪಕ್ಷದ ಮುಂದಿನ ಮೂರು ವರ್ಷಗಳ ನಡೆ ಕುರಿತು ಚರ್ಚೆ ನಡೆಸಿ, 32 ನಿರ್ಣಯಗಳನ್ನ ಕೈಗೊಂಡಿದ್ದು,ಪ್ರಜಾಪ್ರಭುತ್ವ ಮತ್ತು ಕೋಮು ಸೌಹಾರ್ಧತೆಯನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷ ಕೆಲಸ ಮಾಡಲಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸರ್ವಾಧಿಕಾರ ಮತ್ತು ಕೋಮುವಾದಿಕರಣವನ್ನು ಹಿಮ್ಮೆಟ್ಟಿಸಲು, ಪ್ರಜಾಪ್ರಭುತ್ವದ ಸಂರಕ್ಷಣೆಗೆ ಸಿಪಿಐ(ಎಂ) ಕೆಲಸ ಮಾಡಲಿದೆ. ಜೊತೆಗೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ನವ ಉದಾರೀಕರಣದಿಂದ ಜನರ ಮೇಲಾಗುತ್ತಿರುವ ದಾಳಿಯ ವಿರುದ್ದ ಜನರ ಬದುಕನ್ನು ಸಂರಕ್ಷಿಸಲು ಪ್ರಬಲವಾದ ಆಂದೋಲನವನ್ನು ಕಟ್ಟುವ ನಿಟ್ಟಿನಲ್ಲಿ ಮಾಕ್ರ್ಸ್‍ವಾದಿ ಕಮ್ಯುನಿಷ್ಟ ಪಕ್ಷ ಕೆಲಸ ಮಾಡಲಿದೆ ಎಂದರು.

ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ, ಕೋಮು ಸೌರ್ಹಾಧತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಎನ್.ಡಿ.ಎ ಮಿತ್ರಗಳನ್ನು ಅಧಿಕಾರದಿಂದ ದೂರ ಇಡಲು ಎಡ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ. ಇದರ ಅಂಗವಾಗಿ 2025ರ ಫೆಬ್ರವರಿ 20 ರಂದು ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳ ವಿರುದ್ದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.ಫಲವತ್ತಾ ಕೃಷಿ ಭೂಮಿಗಳನ್ನು ಬಲವಂತದ ಭೂಸ್ವಾಧೀನ ಮಾಡಿಕೊಂಡು ಕಂಪನಿ ಕೃಷಿಗೆ ನೀಡುತ್ತಿರುವುದನ್ನು ವಿರೋಧಿಸಿ ಹಾಗೂ ಬಗರ್ ಹುಕ್ಕಂ ಸಾಗುವಳಿದಾರರ ಒಕ್ಕಲೆಬ್ಬಿಸಿ ಭೂ ಬ್ಯಾಂಕ್ ರಚನೆಯನ್ನು ವಿರೋಧಿ ತುಮಕೂರು, ಮೈಸೂರು ಮತ್ತು ಕೋಲಾರ ಚಿಕ್ಕಬಳ್ಳಾಪುರದಿಂದ ಏಕ ಕಾಲಕ್ಕೆ ರೈತರು, ಕೂಲಿ ಕಾರ್ಮಿಕರನ್ನು ಒಳಗೊಂಡ ಬೃಹತ್ ಪಾದಯಾತ್ರೆಯನ್ನು ಆಯೋಜಿಸಿ, ರೈತ ಸಂಘಟನೆಗಳು ಆಯೋಜಿಸಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ, ಆಂದೋಲನದಲ್ಲಿ ಪಾಲ್ಗೊಳ್ಳಲು ಸಿಪಿಐ(ಎಂ) ತೀರ್ಮಾನಿಸಿದೆ ಎಂದು ಯು.ಬಸವರಾಜು ನುಡಿದರು.

ಮುಂಬರುವ ಜನವರಿಯಲ್ಲಿ ಆರ್.ಎಸ್.ಎಸ್. ಗುಲ್ಬರ್ಗದಲ್ಲಿ ಕಲ್ಯಾಣ ಕರ್ನಾಟಕ ಶರಣ ಚಳವಳಿಯ ಮೇಲೆ ದಾಳಿ ನಡೆಸುವ ನಿಟ್ಟಿನಲ್ಲಿ ಭಾರತೀಯ ಸಂಸ್ಕೃತಿ ದರ್ಶನದ ಹೆಸರಿನಲ್ಲಿ ಮಾಡುತ್ತಿರುವ ಸಮಾವೇಶಕ್ಕೆ ಪರ್ಯಾಯವಾಗಿ ಪ್ರಗತಿಪರರು, ಚಿಂತಕರು 2025ರ ಜನವರಿ 3ನೇ ವಾರದಲ್ಲಿ ರೂಪಿಸುವ ಸಮಾವೇಶದಲ್ಲಿ ಸಿಪಿಐ(ಎಂ) ಪಾಲ್ಗೊಳ್ಳಲಿದೆ.ರಾಜ್ಯದಲ್ಲಿ ಕೋಮು ಸೌಹಾರ್ಧತೆ ಕಾಪಾಡುವ ನಿಟ್ಟಿನಲ್ಲಿ ನಡೆಯುವ ಎಲ್ಲಾ ಹೋರಾಟಗಳಲ್ಲಿ ಪಕ್ಷ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಯು.ಬಸವರಾಜು ತಿಳಿಸಿದರು.

ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಮೀನಾಕ್ಷಿ ಸುಂದರಂ ಮಾತನಾಡಿ,ಸಿಪಿಐ(ಎಂ) ಪಕ್ಷದ 24ನೇ ರಾಜ್ಯ ಸಮ್ಮೇಳನದ ಯಶಸ್ವಿಗೆ ಸಹಕರಿಸಿದ ತುಮಕೂರು ಜಿಲ್ಲೆಯ ಜನರಿಗೆ ಪಕ್ಷ ಧನ್ಯವಾದಗಳನ್ನು ತಿಳಿಸುತ್ತದೆ.ಕೇಂದ್ರ ಮತ್ತು ರಾಜ್ಯ ಸರಕಾರಗಳ ತಮ್ಮ ಅರ್ಥಿಕ ನೀತಿಗಳಿಂದಾಗಿ ಜನತೆಗೆ ದ್ರೋಹ ಬಗೆಯುತಿದ್ದು,ಉದ್ಯೋಗ ಸೃಷ್ಟಿ, ಕೃಷಿ, ಆಹಾರ, ಆರೋಗ್ಯ,ಕಾರ್ಮಿಕರು,ವಸತಿ ವಿಚಾರಗಳಲ್ಲಿ ನಿರ್ಲಕ್ಷ ಧೋರಣೆ ತಾಳಿದೆ.ಸುಮಾರು 50 ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದ ಬಜೆಟ್ ಅಧಿವೇಶನ ನಡೆಯುವ ಮುನ್ನ 2025ರ ಮಾರ್ಚ್‍ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಮುಂದಾಗಿದೆ.ಇದರ ಜೊತೆಗೆ, ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾರ್ಮಿಕರಿಗೆ ಸಂಬಂಧಿಸಿದ ನಾಲ್ಕು ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು ಎಂಬ ಬೇಡಿಕೆಯನ್ನು ರಾಜ್ಯ ಸರಕಾರದ ಮುಂದಿಡಲಾಗುವುದು. ಕೇಂದ್ರೀಕೃತ ಆಡಳಿತ ವ್ಯವಸ್ಥೆ, ಹಿಂದಿ ಹೇರಿಕೆಯಿಂದ ಒಕ್ಕೂಟ ವ್ಯವಸ್ತೆಯ ಮೇಲಾಗುತ್ತಿರುವ ದುಷ್ಪರಿಣಾಮಗಳು ಹಾಗೂ ಉದ್ಯೋಗಸ್ತರ ದೈಹಿಕ ಶ್ರಮ ಕಡಿಮೆ ಮಾಡಲು ಬಳಕೆ ಮಾಡಬೇಕಾದ ಎಐ(ಕೃತಕ ಬುದ್ದಿಮತ್ತೆ)ಯನ್ನು ಉದ್ಯೋಗ ನಾಶಕ್ಕೆ ಬಳಕೆ ಮಾಡುತ್ತಿದ್ದು, ಇದರ ವಿರುದ್ದ ಸಿಪಿಐ(ಎಂ) ಹೋರಾಟ ರೂಪಿಸಲಿದೆ ಎಂದರು.

ಸಿಪಿಐ(ಎಂ) ಪಕ್ಷ ವೈಜ್ಞಾನಿಕ ಸಂಶೋಧನೆಗೆ ಬೆಂಬಲ ವ್ಯಕ್ತಪಡಿಸುತ್ತದೆ. ಸಾರ್ವಜನಿಕ ಕಂಪನಿಗಳ ಖಾಸಗೀಕರಣವನ್ನು ಪ್ರಬಲವಾಗಿ ವಿರೋಧಿಸುತ್ತದೆ.ಸಾರ್ವಜನಿಕರ ಮೇಲೆ ಪರೋಕ್ಷ ತೆರಿಗೆ ಹೆಚ್ಚಳ ಮಾಡಿ, ಶ್ರೀಮಂತರ ಅದಾಯ ತೆರಿಗೆ ಕಡಿಮೆ ಮಾಡುವ ಕ್ರಮವನ್ನು ಕೈಬಿಡಬೇಕೆಂಬುದು ಸಿಪಿಐ(ಎಂ)ನ ಒತ್ತಾಯವಾಗಿದೆ.ಮಹಾತ್ಮಗಾಂಧಿ ಅವರು ಹುತಾತ್ಮರಾದ ಜನವರಿ 30 ರಂದು ಸಮಾನ ಮನಸ್ಕ ಪಕ್ಷಗಳೊಂದಿಗೆ ಸೇರಿ ಪ್ರಜಾಪ್ರಭುತ್ವದ ಉಳಿವಿಗಾಗಿ ಬೃಹತ್ ಮಾನವ ಸರಪಳಿ ನಿರ್ಮಿಸಲು ಸಿಪಿಐ(ಎಂ) ಪಕ್ಷ ಮುಂದಾಗಿದೆ ಎಂದು ಮೀನಾಕ್ಷಿ ಸುಂದರಂ ನುಡಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಸೈಯದ್ ಮುಜೀಬ್, ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News