ವಾಲ್ಮೀಕಿ ನಿಗಮದಲ್ಲಿ ಹಗರಣ | ಈ.ಡಿ ದಾಳಿಯ ಅವಶ್ಯಕತೆ ಇರಲಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-07-10 16:29 GMT

ತುಮಕೂರು : "ರಾಜ್ಯ ಸರಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿದೆ. ಹೀಗಾಗಿ ಜಾರಿ ನಿರ್ದೇಶನಾಲಯ (ಈ.ಡಿ) ದಾಳಿ ಮಾಡುವ ಅವಶ್ಯಕತೆ ಇರಲಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಮಾಜಿ ಸಚಿವ ನಾಗೇಂದ್ರ ಮನೆ ಸೇರಿ ಹಲವು ಕಡೆ ಇ.ಡಿ ದಾಳಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ನೊಣವಿನಕೆರೆ ಕಾಡಸಿದ್ದೇಶ್ವರ ಮಠದಲ್ಲಿ ಉತ್ತರಿಸಿದ ಅವರು "ಇಷ್ಟು ದೊಡ್ಡ ಮೊತ್ತದ ಹಗರಣ ಎಂದ ಮೇಲೆ ಬ್ಯಾಂಕ್‌ನವರು ತನಿಖೆ ನಡೆಸುವ ಅಧಿಕಾರವಿದೆ. ಈ.ಡಿ ಯವರು ಅವಶ್ಯಕತೆ ಇರದಿದ್ದರೂ ಬಂದಿದ್ದಾರೆ" ಎಂದು ಹೇಳಿದರು.

"ಈ ಹಿಂದೆ ಬಿಜೆಪಿ ಕಾಲದಲ್ಲಿಯೂ ಇಂತಹ ಪ್ರಕರಣ ನಡೆದಿರುವ ಉದಾಹರಣೆಗಳಿವೆ. ಬಹಳ ವ್ಯವಸ್ಥಿತವಾಗಿ ವಂಚನೆ ಮಾಡಿದ್ದಾರೆ. ವಂಚನೆ ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಪ್ರಕರಣ ಆಗಬಾರದಾಗಿತ್ತು, ನಡೆದು ಹೋಗಿದೆ" ಎಂದು ಹೇಳಿದರು.

ನಾಗೇಂದ್ರ ಅವರ ಮನೆ ಸೇರಿದಂತೆ ನಾಲ್ಕೈದು ಕಡೆ ಇಡೀ ದಾಳಿ ಮಾಡಿದೆ ಎನ್ನುವ ಪ್ರಶ್ನೆಗೆ "ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ನಾಗೇಂದ್ರ ಅವರು ಹಾಗೂ ದದ್ದಲ್ ಅವರಿಗೆ ಎಸ್ ಐಟಿ ನೋಟಿಸ್ ನೀಡಿದೆ. ನಾವು ಆಂತರಿಕವಾಗಿ ಎಲ್ಲಾ ರೀತಿಯಲ್ಲಿ ತನಿಖೆ ಮಾಡಿದ್ದೇವೆ. ಹಗರಣದಲ್ಲಿ ನಮ್ಮ ಶಾಸಕರ, ಸಚಿವರ ಕೈವಾಡ ಇಲ್ಲ ಎಂಬುದನ್ನು ಅವರು ನಮಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರು ಏನೇ ಕೇಳಿದರೂ ಉತ್ತರ ಕೊಡುತ್ತಾರೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News