ತುಮಕೂರು | ಪ್ರತಿಭಟನೆ ವೇಳೆ ಡಿಸಿ ಕಚೇರಿಗೆ ಮುತ್ತಿಗೆ ಯತ್ನ: ಬಿಜೆಪಿ ಕಾರ್ಯಕರ್ತರ ಬಂಧನ

Update: 2024-03-06 18:22 GMT

ತುಮಕೂರು: ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬರುತ್ತಿದ್ದ ಭಜರಂಗದಳ ಮುಖಂಡ ಪುತ್ತೂರಿನ ಮುರಳಿಕೃಷ್ಣ ಅಸಂತಡ್ಕ ಅವರನ್ನು ಪೊಲೀಸರು ಬಂಧಿಸಿದ ಕ್ರಮ ಖಂಡಿಸಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಹಾಗೂ ಮುಖಂಡರನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದರು.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿತ್ತು. ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಸೇರಿದಂತೆ ಬಿಜೆಪಿಯ ಮುಖಂಡರು ಭಾಗವಹಿಸಿದ್ದ ಈ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳೂರಿನ ಪುತ್ತೂರಿನಿಂದ ಆಗಮಿಸುತ್ತಿದ್ದ ಭಜರಂಗದಳ ರಾಜ್ಯ ಸಹ ಸಂಯೋಜಕ್ ಮುರಳಿಕೃಷ ಅಸಂತಡ್ಕ ಅವರನ್ನು ಪೊಲೀಸರು ಕುಣಿಗಲ್ ಬಳಿ ಬಂಧಿಸಿದ್ದರು. ಸಕಾರಣವಿಲ್ಲದೆ ಮುರಳಿಕೃಷ್ಣರನ್ನು ಬಂಧಿಸಿದ್ದನ್ನು ಖಂಡಿಸಿ ಪ್ರತಿಭಟನಾಕಾರರು ಸರಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಡುಗಡೆಗೆ ಒತ್ತಾಯಿಸಿದರು.

ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಾಗುತ್ತಿದೆ. ದೇಶವಿರೋಧ ಕೃತ್ಯಗಳು ವ್ಯಾಪಕವಾಗಿ ನಡೆಯುತ್ತಿವೆ. ಇವುಗಳನ್ನು ತಡೆಯಬೇಕಾಗಿದ್ದ ರಾಜ್ಯ ಕಾಂಗ್ರೆಸ್ ಸರಕಾರ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಾ ಪೋಷಿಸಿತ್ತಿದೆ ಎಂದು ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಭಜರಂಗದಳದ ಮುಖಂಡ ಮುರಳಿಕೃಷ್ಣರನ್ನು ಪೊಲೀಸರು ಬಂಧಿಸಿದ ಕ್ರಮ ಖಂಡನೀಯ, ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ವಿಧಾನಸೌಧದ ಒಳಗೆ ಬಿಡುತ್ತಾರೆ. ಅವರನ್ನು ಬಂಧಿಸಲು ಮೀನಾಮೇಷ ಎಣಿಸುವ ಪೊಲೀಸರು, ರಾಜ್ಯ ಕಾಂಗ್ರೆಸ್ ಸರಕಾರ ಮುರಳಿಕೃಷ್ಣರನ್ನು ಬಂಧಿಸಿ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಬಂಧಿಸಿರುವ ಮುರಳಿಕೃಷ್ಣರನ್ನು ಬಿಡುಗಡೆ ಮಾಡುವಂತೆ ಮುಖಂಡರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು. ಬಿಡುಗಡೆಗೆ ಅವರು ಒಪ್ಪದಿದ್ದಾಗ ಪ್ರತಿಭಟನಾನಿರತರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪೊಲೀಸರು ತಡೆದು ಅವರನ್ನು ಬಂಧಿಸಿದರು.

ಮುಖಂಡರಾದ ಎಸ್.ಶಿವಪ್ರಸಾದ್, ವೈ.ಎಚ್.ಹುಚ್ಚಯ್ಯ,ಬ್ಯಾಟರಂಗೇಗೌಡ, ವಿನಯಬಿದರೆ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News