ಮುಸ್ಲಿಮ್ ಬಾಂಧವ್ಯ ವೇದಿಕೆಯಿಂದ ಸಿದ್ಧಗಂಗಾ ಮಠ ಭೇಟಿ

Update: 2024-07-07 08:58 GMT

ತುಮಕೂರು, ಜು.7: ಇಲ್ಲಿನ ಕನ್ನಡ ಭವನದಲ್ಲಿ ನಡೆದ ಮುಸ್ಲಿಮ್ ಬಾಂಧವ್ಯ ವೇದಿಕೆಯ ವಾರ್ಷಿಕ ಪದಗ್ರಹಣ ಸಮಾರಂಭಕ್ಕಿಂತ ಮುಂಚೆ ವೇದಿಕೆಯ ಸದಸ್ಯರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯೊಂದಿಗೆ ಪ್ರಸಕ್ತ ರಾಜಕೀಯ, ಸಾಮಾಜಿಕ ವಿಚಾರಗಳ ಬಗ್ಗೆ ಚರ್ಚಿಸಿದರು.

ತಂಡದ ನೇತೃತ್ವ ವಹಿಸಿದ್ದ ವೇದಿಕೆಯ ಗೌರವಾಧ್ಯಕ್ಷ ಎಸ್.ಬಿ.ದಾರಿಮಿ, ರಾಜ್ಯದಲ್ಲಿ ಕೋಮು ಸೌಹಾರ್ದ ಹದೆಗಡುತ್ತಿರುವ ದಿನಗಳಲ್ಲಿ ಮಠಾಧಿಪತಿಗಳು ಮಧ್ಯ ಪ್ರವೇಶಿಸಿ ದುಷ್ಟಶಕ್ತಿಗಳ ಮೇಲೆ ನಿಯಂತ್ರಣ ಸಾಧಿಸಬೇಕು. ಕೆಲವೊಮ್ಮೆ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮೌನವನ್ನು ಸಮಾಜಘಾತುಕ ಶಕ್ತಿಗಳು ವರದಾನವಾಗಿ ಬಳಸಿಕೊಳ್ಳುವ ಅಪಾಯ ಇದೆ. ಹಾಗಾಗಬಾರದು, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಶಾಂತಿಯ ಮರುಸ್ಥಾಪನೆಯ ಅಗತ್ಯವಿದೆ. ಮಠಾಧೀಶರು ಸೇರಿದಂತೆ ಸಮಾಜದ ಎಲ್ಲರೂ ಇದಕ್ಕೆ ಕೈಜೋಡಿಸಬೇಕು. ರಾಜ್ಯದ ಪ್ರಮುಖ ಮಠವೆಂಬ ನೆಲೆಯಲ್ಲಿ ಪೀಠಾಧಿಪತಿಯಾದ ತಾವು ಕೋಮು ಸೌಹಾರ್ದ ಗಟ್ಟಿಗೊಳ್ಳಲು ನಿರ್ಣಾಯಕ ಭೂಮಿಕೆ ನಿಭಾಯಿಸಬೇಕು" ಎಂದು ಸಿದ್ಧಲಿಂಗ ಸ್ವಾಮಿಗೆ ಮನವಿ ಮಾಡಿದರು.

ವೇದಿಕೆಯ ಪದಗ್ರಹಣ

ಮಠ ಭೇಟಿಯ ಬಳಿಕ ಕನ್ನಡ ಭವನದಲ್ಲಿ ವೇದಿಕೆಯ ವಾರ್ಷಿಕ ಪದಗ್ರಹಣ ಸಮಾರಂಭ ನಡೆಯಿತು. ವೇದಿಕೆಯ ನೂತನ ಅಧ್ಯಕ್ಷರಾಗಿ ಮೈಸೂರಿನ ಸುಹೈಲ್ ಅಹ್ಮದ್ ಮರೂರ್, ಕಾರ್ಯದರ್ಶಿಗಳಾಗಿ ಶಿವಮೊಗ್ಗ ಜಿಲ್ಲೆಯ ಡಾ.ಹಕೀಮ್ ತೀರ್ಥಹಳ್ಳಿ ಅಧಿಕಾರ ವಹಿಸಿಕೊಂಡರು.

ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬರನ್ನು ಜೀವಮಾನದ ಸಮಾಜಸೇವೆಗಾಗಿ ಸನ್ಮಾನಿಸಲಾಯಿತು.

ಕರ್ನಾಟಕ ಮುಸ್ಲಿಮ್ ಬಾಂಧವ್ಯ ವೇದಿಕೆಯ ಮುಂದಾಳುಗಳಾದ ಅನಿಸ್ ಪಾಷಾ, ಮುಷ್ತಾಕ್ ಹೆನ್ನಾಬೈಲ್, ರಫೀಕ್ ನಾಗುರ್, ಝಮೀರ್ ಅಹ್ಮದ್ ರಷಾದಿ, ಇಬ್ರಾಹೀಂ ಸಾಹೇಬ್ ಕೋಟ, ಅಶ್ರಫ್ ಕುಂದಾಪುರ, ಮುಬಾರಕ್ ಗುಲ್ವಾಡಿ, ಅಬ್ದುಲ್ ರವೂಫ್, ಅಸ್ಲಂ ಹೈಕಾಡಿ, ನಝೀರ್ ಬೆಳುವಾಯಿ, ರಹ್ಮತ್ ದಾವಣಗೆರೆ, ಮುಹಮ್ಮದ್ ಪೀರ್ ಲಟಗೇರಿ, ಮುಝಾಫರ್ ಹುಸೈನ್, ನಾಸಿರ್ ಅಹ್ಮದ್ ಚಿಕ್ಕಮಗಳೂರು, ಚಮನ್ ಶರೀಫ್, ಅಸ್ಲಮ್ ಪಾಷಾ ನ್ಯಾಮತಿ, ದಸ್ತಗೀರ್ ತುಮಕೂರು ಮುಂತಾದವರು ಉಪಸ್ಥಿತರಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News